
ಡೆವಲಪರ್ ನಿಯಮಗಳು
- ಕನ್ನಡ
- Bahasa Indonesia
- Bahasa Melayu - Malaysia
- Čeština – Česká republika
- Dansk - Danmark
- Deutsch – Deutschland
- English
- Español - España
- Español - México
- Farsi
- Français - France
- Hrvatski – Hrvatska
- Italiano - Italia
- Magyar – Magyarország
- Nederlands - Nederland
- Norwegian Bokmål
- Polski (Polska)
- Português - Brasil
- Português - Portugal
- Română - România
- Slovenčina - Slovensko
- Suomi – Suomi
- Svenska – Sverige
- Tagalog
- Tiếng Việt - Việt Nam
- Türkçe - Türkiye
- Ελληνικά - Ελλάδα
- Български – България
- Русский — Россия
- Српски – Србија
- Українська — Україна
- עברית
- اردو
- العربية
- मराठी
- हिंदी भारत
- বাংলা
- ગુજરાતી
- தமிழ்
- తెలుగు
- ไทย
- 한국어 - 대한민국
- 中文 - 繁體
- 日本語 - 日本
- 简体中文
ಸೆಪ್ಟೆಂಬರ್ 24, 2024ರಿಂದ ಜಾರಿಗೆ ಬಂದಿದೆ. ಕೊನೆಯದಾಗಿ ಮಾರ್ಚ್ 24, 2026 ರಂದು ಪರಿಷ್ಕರಿಸಲಾಗಿದೆ
ಸ್ವಾಗತ! Reddit ನ “ಡೆವಲಪರ್ ಸೇವೆಗಳನ್ನು” ಪ್ರವೇಶಿಸಿ ಬಳಸಲು ನೀವು ಆಸಕ್ತಿ ತೋರಿರುವುದಕ್ಕೆ ನಮಗೆ ಸಂತೋಷವಾಗಿದೆ. ಇದರಲ್ಲಿ ಡೆವಲಪರ್ಗಳಿಗಾಗಿ ನಮ್ಮ ವೇದಿಕೆ (“ಡೆವಲಪರ್ ಪ್ಲಾಟ್ಫಾರ್ಮ್” ಅಥವಾ “Devvit”), ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ಗಳು (“APIs”), ಎಂಬೆಡ್ಗಳ ಸೇವೆ (“Reddit Embeds”), ಸಾಫ್ಟ್ವೇರ್ ಅಭಿವೃದ್ಧಿ ಕಿಟ್ಗಳು (“SDKs”), ಇತರ ಡೆವಲಪರ್ ಉತ್ಪನ್ನಗಳು ಮತ್ತು ಸೇವೆಗಳು, ಹಾಗೆಯೇ ಅವುಗಳಿಗೆ ಸಂಬಂಧಿಸಿದ ಸಾಫ್ಟ್ವೇರ್, ಡೇಟಾ ಮತ್ತು ಕೋಡ್ ಸೇರಿವೆ.
ಈ Reddit ಡೆವಲಪರ್ ನಿಯಮಗಳು (“ಡೆವಲಪರ್ ನಿಯಮಗಳು”), ಡೆವಲಪರ್ ಸೇವೆಗಳಿಗೆ ಸಂಬಂಧಿಸಿದ Reddit ನ ದಾಖಲೆಗಳು, ನೀತಿಗಳು, ಮಾರ್ಗಸೂಚಿಗಳು ಮತ್ತು ಇತರ ವಿಷಯಗಳು (ಒಟ್ಟಾಗಿ, “ಡೆವಲಪರ್ ದಾಖಲೆಗಳು”), ಹಾಗೂ Reddit ಬಳಕೆದಾರರ ಒಪ್ಪಂದ (“ಬಳಕೆದಾರರ ಒಪ್ಪಂದ”) ಇವೆಲ್ಲವೂ ನೀವು ಡೆವಲಪರ್ ಸೇವೆಗಳನ್ನು ಹೇಗೆ ಪ್ರವೇಶಿಸಿ ಬಳಸಬೇಕು ಎಂಬುದನ್ನು ನಿಯಂತ್ರಿಸುತ್ತವೆ ಮತ್ತು ಇವುಗಳು ನಿಮ್ಮ ಮತ್ತು Reddit ನಡುವಿನ ಒಪ್ಪಂದವಾಗಿವೆ. ಡೆವಲಪರ್ ನಿಯಮಗಳಲ್ಲಿ, ನಮ್ಮ ಬಳಕೆದಾರರ ಒಪ್ಪಂದದಲ್ಲಿ ವ್ಯಾಖ್ಯಾನಿಸಿರುವ ಕೆಲವು ಪದಗಳು ಮತ್ತು ಅರ್ಥಗಳು ಸೇರಿವೆ.
ನಿಮ್ಮ ವೆಬ್ಸೈಟ್ಗಳು, ವೆಬ್ಪುಟಗಳು, ಅಪ್ಲಿಕೇಶನ್ಗಳು, ಬಾಟ್ಗಳು, ಸೇವೆಗಳು, ಸಂಶೋಧನೆ ಮತ್ತು ಇತರ ಸೇವೆಗಳು, ವೇದಿಕೆಗಳು ಹಾಗೂ ಸಾಧನಗಳು (ಪ್ರತಿಯೊಂದನ್ನೂ “ಆಪ್” ಎಂದು ಕರೆಯಲಾಗುತ್ತದೆ) ಡೆವಲಪರ್ ಸೇವೆಗಳ ಮೂಲಕ, ಡೆವಲಪರ್ ನಿಯಮಗಳು ಮತ್ತು ಅನ್ವಯಿಸುವ ಹೆಚ್ಚುವರಿ ನಿಯಮಗಳ ಪ್ರಕಾರ, ಸೇವೆಗಳು, ನಮ್ಮ ಅಂತಿಮ ಬಳಕೆದಾರರು (“ಬಳಕೆದಾರರು”) ಮತ್ತು ಬಳಕೆದಾರರು ಸಲ್ಲಿಸಿದ ವಿಷಯ (“ಬಳಕೆದಾರರ ವಿಷಯ”)ಗಳೊಂದಿಗೆ ಸಂಪರ್ಕ ಸಾಧಿಸಬಹುದು.
ಡೆವಲಪರ್ ನಿಯಮಗಳನ್ನು ಒಪ್ಪಿಕೊಳ್ಳುವ ಮೂಲಕ ಅಥವಾ ಬೇರೆ ರೀತಿಯಲ್ಲಿ ಡೆವಲಪರ್ ಸೇವೆಗಳನ್ನು ಪ್ರವೇಶಿಸುವ ಮೂಲಕ, ನೀವು ಡೆವಲಪರ್ ನಿಯಮಗಳನ್ನು ಪಾಲಿಸಲು ಒಪ್ಪುತ್ತೀರಿ. ನೀವು ಡೆವಲಪರ್ ನಿಯಮಗಳನ್ನು ಒಪ್ಪದಿದ್ದರೆ, ಡೆವಲಪರ್ ಸೇವೆಗಳನ್ನು ಪ್ರವೇಶಿಸಬಾರದು ಅಥವಾ ಬಳಸಬಾರದು.
1. ನೋಂದಣಿ
1.1 ಅರ್ಹತೆ
ಈ ಕೆಳಗಿನ ಸಂದರ್ಭಗಳಲ್ಲಿ ನೀವು ಡೆವಲಪರ್ ಸೇವೆಗಳನ್ನು ಬಳಸಬಾರದು ಮತ್ತು ಡೆವಲಪರ್ ನಿಯಮಗಳನ್ನು ಒಪ್ಪಿಕೊಳ್ಳಬಾರದು: (a) Reddit ಜೊತೆ ಕಾನೂನುಬದ್ಧ ಒಪ್ಪಂದ ಮಾಡಿಕೊಳ್ಳಲು ಅಗತ್ಯವಿರುವ ಕಾನೂನುಬದ್ಧ ವಯಸ್ಸನ್ನು ನೀವು ತಲುಪಿರದಿದ್ದರೆ; (b) ನೀವು ವಾಸಿಸುವ ದೇಶ ಅಥವಾ ಡೆವಲಪರ್ ಸೇವೆಗಳನ್ನು ಬಳಸುವ ದೇಶ ಸೇರಿದಂತೆ, ಅಮೆರಿಕ ಸಂಯುಕ್ತ ಸಂಸ್ಥಾನ ಅಥವಾ ಇತರ ದೇಶಗಳ ಅನ್ವಯಿಸುವ ಕಾನೂನುಗಳ ಪ್ರಕಾರ ಡೆವಲಪರ್ ಸೇವೆಗಳನ್ನು ಪ್ರವೇಶಿಸಲು, ಬಳಸಲು ಅಥವಾ ಪಡೆಯಲು ನಿರ್ಬಂಧಿಸಲಾದ ವ್ಯಕ್ತಿಯಾಗಿದ್ದರೆ; ಅಥವಾ (c) ನಿಮ್ಮ ಖಾತೆ (ನಿಮ್ಮ ನಿಯಂತ್ರಣದಲ್ಲಿರುವ ಯಾವುದೇ ಪರ್ಯಾಯ ಖಾತೆಯೂ ಸೇರಿದಂತೆ) ಅಮಾನತುಗೊಂಡಿದ್ದರೆ, ಮುಕ್ತಾಯಗೊಂಡಿದ್ದರೆ, ನಮ್ಮ ಬಳಕೆದಾರರ ಒಪ್ಪಂದವನ್ನು ಉಲ್ಲಂಘಿಸಿದ್ದರೆ ಅಥವಾ ಬೇರೆ ಯಾವುದೇ ಕಾರಣದಿಂದ ಉತ್ತಮ ಸ್ಥಿತಿಯಲ್ಲಿಲ್ಲದಿದ್ದರೆ.
1.2 ಸಂಸ್ಥೆಯ ಬಳಕೆ
ನಿಮ್ಮ ಉದ್ಯೋಗದಾತರ ಅಥವಾ ಬೇರೆ ಯಾವುದೇ ಸಂಸ್ಥೆಯ ಪರವಾಗಿ ಡೆವಲಪರ್ ನಿಯಮಗಳನ್ನು ಒಪ್ಪಿಕೊಳ್ಳುತ್ತಿದ್ದರೆ, ನೀವು ಈ ಕೆಳಗಿನ ವಿಷಯಗಳನ್ನು ಖಚಿತಪಡಿಸುತ್ತೀರಿ ಮತ್ತು ಭರವಸೆ ನೀಡುತ್ತೀರಿ:(a) ನಿಮ್ಮ ಉದ್ಯೋಗದಾತರು ಅಥವಾ ಸಂಬಂಧಿಸಿದ ಸಂಸ್ಥೆಯನ್ನು ಡೆವಲಪರ್ ನಿಯಮಗಳಿಗೆ ಬದ್ಧವಾಗುವಂತೆ ಮಾಡಲು ನಿಮಗೆ ಸಂಪೂರ್ಣ ಕಾನೂನುಬದ್ಧ ಅಧಿಕಾರವಿದೆ; (b) ನೀವು ಡೆವಲಪರ್ ನಿಯಮಗಳನ್ನು ಓದಿ ಅರ್ಥಮಾಡಿಕೊಂಡಿದ್ದೀರಿ; ಮತ್ತು (c) ನೀವು ಪ್ರತಿನಿಧಿಸುವ ವ್ಯಕ್ತಿ ಅಥವಾ ಸಂಸ್ಥೆಯ ಪರವಾಗಿ ಡೆವಲಪರ್ ನಿಯಮಗಳನ್ನು ಒಪ್ಪಿಕೊಳ್ಳುತ್ತೀರಿ. ನಿಮ್ಮ ಉದ್ಯೋಗದಾತರು ಅಥವಾ ಸಂಬಂಧಿಸಿದ ಸಂಸ್ಥೆಯನ್ನು ಡೆವಲಪರ್ ನಿಯಮಗಳಿಗೆ ಬದ್ಧವಾಗುವಂತೆ ಮಾಡಲು ನಿಮಗೆ ಕಾನೂನುಬದ್ಧ ಅಧಿಕಾರವಿಲ್ಲದಿದ್ದರೆ, ದಯವಿಟ್ಟು ಡೆವಲಪರ್ ಸೇವೆಗಳನ್ನು ಬಳಸಬೇಡಿ.
1.3 ನಿಮ್ಮ ಮಾಹಿತಿ
ಡೆವಲಪರ್ ಸೇವೆಗಳನ್ನು ಪ್ರವೇಶಿಸಲು ಮತ್ತು ಬಳಸಲು, ನಿಮ್ಮ ಆಪ್ಗೆ ಸಂಬಂಧಿಸಿದ ಮಾಹಿತಿ (ಉದಾಹರಣೆಗೆ, ಹೆಸರು ಮತ್ತು ವಿವರಣೆ) ಹಾಗೂ ನಿಮ್ಮ ಬಗ್ಗೆ ಮಾಹಿತಿ (ಉದಾಹರಣೆಗೆ, ನಿಮ್ಮ ಹೆಸರು ಮತ್ತು ಇಮೇಲ್) ನೀಡುವಂತೆ Reddit ನಿಮ್ಮನ್ನು ಕೇಳಬಹುದು. ಈ ಮಾಹಿತಿಯನ್ನು Reddit ಸಂಗ್ರಹಿಸಿ ಬಳಸಲು ನೀವು ಒಪ್ಪುತ್ತೀರಿ. ನೀವು ನಮಗೆ ನೀಡಿರುವ ಮಾಹಿತಿಯಲ್ಲಿ ಯಾವುದೇ ಬದಲಾವಣೆಗಳಾದರೆ, ಆ ಬದಲಾವಣೆಗಳನ್ನು ನಮಗೆ ತಿಳಿಸಬೇಕು. ನಿಮ್ಮ ಮಾಹಿತಿಯನ್ನು ಎಲ್ಲ ಸಮಯದಲ್ಲೂ ಸರಿಯಾದ, ಸಂಪೂರ್ಣ ಮತ್ತು ನವೀಕೃತವಾಗಿರುವಂತೆ ನೋಡಿಕೊಳ್ಳಬೇಕು.
1.4 ಪ್ರವೇಶ ಮಾಹಿತಿ
Reddit ನಿಮಗೆ ಅಧಿಕೃತವಾಗಿ ನೀಡಿರುವ ಮತ್ತು (ಬಳಸಲು ಅನುಮತಿಸಿರುವ) ಟೋಕನ್ಗಳು, ಕೀಗಳು, ಪಾಸ್ವರ್ಡ್ಗಳು, ಲಾಗಿನ್ ವಿವರಗಳು ಮತ್ತು ಇತರ ಪ್ರವೇಶ ನಿಯಂತ್ರಣಗಳ ಮೂಲಕ ಮಾತ್ರ ನೀವು ಡೆವಲಪರ್ ಸೇವೆಗಳನ್ನು ಪ್ರವೇಶಿಸಬೇಕು ಅಥವಾ ಪ್ರವೇಶಿಸಲು ಪ್ರಯತ್ನಿಸಬೇಕು ಮತ್ತು ಬಳಸಬೇಕು. ಇವೆಲ್ಲವನ್ನೂ (ಒಟ್ಟಾಗಿ “ಪ್ರವೇಶ ಮಾಹಿತಿ”) ಎಂದು ಕರೆಯಲಾಗುತ್ತದೆ. ನಿಮ್ಮ ಪ್ರವೇಶ ಮಾಹಿತಿಯನ್ನು ಡೆವಲಪರ್ ನಿಯಮಗಳು ಮತ್ತು ನಮ್ಮ ಡೆವಲಪರ್ ದಾಖಲೆಗಳ ಪ್ರಕಾರ ಬಳಸಬೇಕು. Reddit ನ ಅನುಮತಿಯಿಲ್ಲದೆ ನಿಮ್ಮ ಪ್ರವೇಶ ಮಾಹಿತಿಯನ್ನು ಬೇರೆ ಯಾವುದೇ ಮೂರನೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬಾರದು. ನಿಮ್ಮ ಪ್ರವೇಶ ಮಾಹಿತಿಯನ್ನು ಎಲ್ಲ ಸಮಯದಲ್ಲೂ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು.
2. ಡೆವಲಪರ್ ಸೇವೆಗಳ ಬಳಕೆಗಾಗಿ ನಿಮ್ಮ ನಿಯಮಗಳು
2.1 ನಿಮಗೆ ನಾವು ನೀಡುವ ಪರವಾನಗಿ
ಡೆವಲಪರ್ ನಿಯಮಗಳು ಮತ್ತು ನಮ್ಮ ಬಳಕೆದಾರರ ಒಪ್ಪಂದವನ್ನು ನೀವು ಸಂಪೂರ್ಣವಾಗಿ ಮತ್ತು ನಿರಂತರವಾಗಿ ಪಾಲಿಸುವ ಷರತ್ತಿನ ಮೇರೆಗೆ, Reddit ನಿಮಗೆ ಈ ಕೆಳಗಿನ ಉದ್ದೇಶಗಳಿಗೆ ಮಾತ್ರ ವಿಶೇಷವಲ್ಲದ, ವರ್ಗಾಯಿಸಲಾಗದ, ಉಪಪರವಾನಗಿ ನೀಡಲಾಗದ ಮತ್ತು ಹಿಂಪಡೆಯಬಹುದಾದ ಪರವಾನಗಿಯನ್ನು ನೀಡುತ್ತದೆ:
-
ನಿಮ್ಮ ಆ್ಯಪ್ನೊಂದಿಗೆ ಸಂಪರ್ಕ ಸಾಧಿಸಲು, ಅದನ್ನು ಅಭಿವೃದ್ಧಿಪಡಿಸಲು, ನಿಯೋಜಿಸಲು, ಹಂಚಲು ಮತ್ತು ನಡೆಸಲು, ನಾವು ನಿಮಗೆ ಲಭ್ಯವಾಗುವಂತೆ ಮಾಡುವ ಡೆವಲಪರ್ ಸೇವೆಗಳು ಮತ್ತು ಡೆವಲಪರ್ ದಾಖಲಾತಿಯನ್ನು ಪ್ರವೇಶಿಸಿ ಬಳಸಲು;
-
ನೀವು ಬಳಸುತ್ತಿರುವ ಡೆವಲಪರ್ ಸೇವೆಗಳಿಗೆ ಇದು ಅನ್ವಯಿಸಿದರೆ, ನಿಮ್ಮ ಆ್ಯಪ್ನಲ್ಲಿ ಮತ್ತು ಅದರ ಮೂಲಕ ಬಳಕೆದಾರರ ವಿಷಯವನ್ನು ನಿಮ್ಮ ಆ್ಯಪ್ ಬಳಕೆದಾರರಿಗೆ (ಕೆಳಗೆ ವಿವರಿಸಿರುವಂತೆ) ನಕಲಿಸಿ ತೋರಿಸಲು ಮತ್ತು ನಿಮ್ಮ ಆ್ಯಪ್ನಲ್ಲಿ ತೋರಿಸಲು ಅನುಕೂಲವಾಗುವಂತೆ ಮಾತ್ರ ಬಳಕೆದಾರರ ವಿಷಯದ ಸ್ವರೂಪವನ್ನು ಬದಲಾಯಿಸಲು; ಮತ್ತು
-
ನಿಮ್ಮ ಆ್ಯಪ್ನಲ್ಲಿ ಬಳಕೆದಾರರ ವಿಷಯದ ಮೂಲ Reddit ಎಂಬುದನ್ನು ತಿಳಿಸಲು ಮಾತ್ರ, ನಮ್ಮ ಬ್ರ್ಯಾಂಡ್ ಮಾರ್ಗಸೂಚಿಗಳು ಮತ್ತು ಪ್ರೆಸ್ ಮಾರ್ಗಸೂಚಿಗಳ ಪ್ರಕಾರ, Reddit ನ ಟ್ರೇಡ್ಮಾರ್ಕ್ಗಳು ಮತ್ತು ವ್ಯಾಪಾರ ಹೆಸರುಗಳನ್ನು (“Reddit ಟ್ರೇಡ್ಮಾರ್ಕ್ಗಳು”) ಬಳಸಬಹುದು ಮತ್ತು ಪ್ರದರ್ಶಿಸಬಹುದು.
ಪ್ರತಿ ಸಂದರ್ಭದಲ್ಲೂ, ಡೆವಲಪರ್ ನಿಯಮಗಳು ಮತ್ತು ಡೆವಲಪರ್ ದಾಖಲಾತಿಗಳ ಪ್ರಕಾರ, ಅವುಗಳಲ್ಲಿ ಸ್ಪಷ್ಟವಾಗಿ ಅನುಮತಿಸಿರುವ ಅಥವಾ ಅಗತ್ಯವಿರುವ ರೀತಿಯಲ್ಲಿ ಮಾತ್ರ (“Reddit ಪರವಾನಗಿ”).
Reddit ನ ಪಾಲುದಾರರಿಗೆ ಸೇರಿದ ಬಳಕೆದಾರರ ವಿಷಯಗಳು (ನಮ್ಮ ಜಾಹೀರಾತುದಾರರು, ಸಂಬಂಧಿತ ಸಂಸ್ಥೆಗಳು ಮತ್ತು ಇತರ ಪಾಲುದಾರರಿಂದ ಪರವಾನಗಿ ಪಡೆದ ವಿಷಯಗಳು ಸೇರಿದಂತೆ) ಅಥವಾ ತಮ್ಮದೇ ನಿಯಮಗಳಿಗೆ ಒಳಪಡುವ ತೃತೀಯ ಪಕ್ಷದ ಸಾಫ್ಟ್ವೇರ್ಗಳು (ಉದಾಹರಣೆಗೆ, ಓಪನ್ ಸೋರ್ಸ್ ಸಾಫ್ಟ್ವೇರ್) Reddit ಪರವಾನಗಿಯಲ್ಲಿ ಸೇರಿರುವುದಿಲ್ಲ. Reddit ಮತ್ತು ನಮಗೆ ಪರವಾನಗಿ ನೀಡಿರುವವರು, Reddit ಪರವಾನಗಿಯಲ್ಲಿ ನಿಮಗೆ ಸ್ಪಷ್ಟವಾಗಿ ನೀಡದಿರುವ ಎಲ್ಲಾ ಹಕ್ಕುಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುತ್ತಾರೆ. ಅನ್ವಯವಾಗುವ ತೃತೀಯ ಪಕ್ಷದ ಅಥವಾ ಓಪನ್ ಸೋರ್ಸ್ ಪರವಾನಗಿ ನಿಯಮಗಳನ್ನು ಪಾಲಿಸುವುದು ನಿಮ್ಮ ಜವಾಬ್ದಾರಿ.
ಈ ವಿಭಾಗದಲ್ಲಿ ನಿಮಗೆ ಸ್ಪಷ್ಟವಾಗಿ ನೀಡದಿರುವ ಎಲ್ಲ ಹಕ್ಕುಗಳನ್ನು Reddit ತನ್ನಲ್ಲೇ ಕಾಯ್ದಿರಿಸಿಕೊಂಡಿದೆ. ಡೆವಲಪರ್ ನಿಯಮಗಳಲ್ಲಿರುವ ಯಾವುದೂ ನಿಮಗೆ ಯಾವುದೇ ರೀತಿಯ ಪರೋಕ್ಷ ಪರವಾನಗಿಯನ್ನು ನೀಡುವುದಿಲ್ಲ.
2.2 ಪರಿಶೀಲಿಸುವ ಹಕ್ಕು
ಡೆವಲಪರ್ ಸೇವೆಗಳು, ಸೇವೆಗಳು, ಬಳಕೆದಾರರ ವಿಷಯ ಅಥವಾ ಇವುಗಳ ಮೂಲಕ ಪಡೆದ ಅಥವಾ ಇವುಗಳಿಂದ ಬಂದ ಮಾಹಿತಿ, ದತ್ತಾಂಶ, ಸಾಮಗ್ರಿಗಳು ಮತ್ತು ಇತರ ವಿಷಯಗಳನ್ನು (ಒಟ್ಟಾಗಿ “Reddit ಸೇವೆಗಳು and ಡೇಟಾ”) ನೀವು ಹೇಗೆ ಬಳಸುತ್ತೀರಿ ಎಂಬುದನ್ನು Reddit ಗಮನಿಸಬಹುದು. ಡೆವಲಪರ್ ನಿಯಮಗಳು ಮತ್ತು ಡೆವೆಲಪರ್ ದಾಖಲಾತಿ ನಿಯಮಗಳನ್ನು ನೀವು ಪಾಲಿಸುತ್ತಿದ್ದೀರಾ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ಆಪ್ ಮತ್ತು Reddit ಸೇವೆಗಳು ಮತ್ತು ಡೇಟಾ ಅನ್ನು ನೀವು ಹೇಗೆ ಪ್ರವೇಶಿಸಿ ಬಳಸುತ್ತೀರಿ ಎಂಬುದನ್ನು ಪರಿಶೀಲಿಸಬಹುದು. Reddit ನಡೆಸುವ ಮೇಲ್ವಿಚಾರಣೆಗೆ ನೀವು ಅಡ್ಡಿಪಡಿಸಬಾರದು. ಯಾವುದೇ ಪರಿಶೀಲನೆ ನಡೆದಾಗ Reddit ಗೆ ಸಹಕರಿಸಬೇಕು. ನೀವು ಮತ್ತು ನಿಮ್ಮ ಆಪ್ ಡೆವಲಪರ್ ನಿಯಮಗಳು ಹಾಗೂ ಡೆವಲಪರ್ ದಾಖಲಾತಿ ನಿಯಮಗಳನ್ನು ಪಾಲಿಸುತ್ತಿದ್ದೀರಿ ಎಂಬುದನ್ನು ತೋರಿಸಲು Reddit ಕೇಳುವ ಮಾಹಿತಿಯನ್ನು ನೀಡಬೇಕು. ನೀವು Reddit ಸೇವೆಗಳು ಮತ್ತು ದತ್ತಾಂಶದಲ್ಲಿ ಯಾವುದೇ ರೀತಿಯಲ್ಲಿ ಅಡ್ಡಿಪಡಿಸುತ್ತಿರುವುದು Reddit ಗೆ ಕಂಡುಬಂದರೆ, ಆ ಅಡ್ಡಿಪಡಿಸುವಿಕೆಯನ್ನು ತಡೆಯಲು, ಬ್ಲಾಕ್ ಮಾಡಲು ಅಥವಾ ನಿವಾರಿಸಲು Reddit ಅಗತ್ಯವಾದ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ನೀವು ಒಪ್ಪುತ್ತೀರಿ.
2.3 ನವೀಕರಣಗಳು
Reddit ಯಾವುದೇ ಸಮಯದಲ್ಲಿ ಡೆವಲಪರ್ ಸೇವೆಗಳ ಯಾವುದೇ ಭಾಗವನ್ನು ಬದಲಾಯಿಸಬಹುದು, ತಾತ್ಕಾಲಿಕವಾಗಿ ಅಮಾನತುಗೊಳಿಸಬಹುದು ಅಥವಾ ಸಂಪೂರ್ಣವಾಗಿ ನಿಲ್ಲಿಸಬಹುದು. Reddit ತನ್ನ ನಿರ್ಧಾರದಂತೆ, ಆಗಾಗ್ಗೆ Reddit ಸೇವೆಗಳು ಮತ್ತು ದತ್ತಾಂಶವನ್ನು ನವೀಕರಿಸಬಹುದು ಅಥವಾ ಬದಲಾಯಿಸಬಹುದು. ಈ ನವೀಕರಣಗಳಿಂದ ನೀವು ಅಥವಾ ನಿಮ್ಮ ಆಪ್ Reddit ಸೇವೆಗಳು ಮತ್ತು ದತ್ತಾಂಶವನ್ನು ಪ್ರವೇಶಿಸುವ ಅಥವಾ ಅವುಗಳೊಂದಿಗೆ ಸಂಪರ್ಕಿಸುವ ವಿಧಾನಕ್ಕೆ ತೊಂದರೆಯಾಗಬಹುದು. ಬಳಕೆದಾರರ ವಿಷಯವನ್ನು ನಿಮ್ಮ ಆಪ್ನಲ್ಲಿ ತೋರಿಸುವ ವಿಧಾನವೂ ಇದರಿಂದ ಬದಲಾಗಬಹುದು. ನೀವು Reddit ಸೇವೆಗಳು ಮತ್ತು ದತ್ತಾಂಶದ ಇತ್ತೀಚಿನ ಆವೃತ್ತಿಯನ್ನೇ ಬಳಸಬೇಕು. ಅವುಗಳಲ್ಲಿ ನವೀಕರಣವಾದಾಗ, ಅದಕ್ಕೆ ಅನುಗುಣವಾಗಿ ನಿಮ್ಮ ಆಪ್ನಲ್ಲಿ ಅಗತ್ಯವಿರುವ ಬದಲಾವಣೆಗಳನ್ನು ಮಾಡಬೇಕು. Reddit ಸೇವೆಗಳು ಮತ್ತು ದತ್ತಾಂಶದಲ್ಲಿ ನವೀಕರಣವಾದ ನಂತರವೂ ನೀವು ಅವುಗಳನ್ನು ಮುಂದುವರಿಸಿ ಬಳಸಿದರೆ, ಆ ನವೀಕರಣವನ್ನು ನೀವು ಒಪ್ಪಿಕೊಂಡಿದ್ದೀರಿ ಎಂದು ಪರಿಗಣಿಸಲಾಗುತ್ತದೆ.
2.4 ಡೆವಲಪರ್ ಸೇವೆಗಳಿಗೆ ಅನ್ವಯಿಸುವ ಹೆಚ್ಚುವರಿ ನಿಯಮಗಳು
ನಾವು ವಿವಿಧ ರೀತಿಯ ಡೆವಲಪರ್ ಸೇವೆಗಳನ್ನು ನೀಡುವುದರಿಂದ, Reddit ನೀಡುವ ಕೆಲವು ನಿರ್ದಿಷ್ಟ ಡೆವಲಪರ್ ಸೇವೆಗಳನ್ನು ಬಳಸುವ ಮೊದಲು, ಹೆಚ್ಚುವರಿ ನಿಯಮಗಳನ್ನು ಒಪ್ಪಿಕೊಳ್ಳಲು ನಿಮ್ಮನ್ನು ಕೇಳಬಹುದು. ಉದಾಹರಣೆಗೆ:
-
ನೀವು ನಮ್ಮ ಡೇಟಾ API ಬಳಸಿದರೆ, ನಮ್ಮ ಡೇಟಾ API ನಿಯಮಗಳನ್ನೂ ಒಪ್ಪಿಕೊಳ್ಳಬೇಕು.
-
ನೀವು Reddit ಎಂಬೆಡ್ಗಳನ್ನು ಬಳಸಿದರೆ, ನಮ್ಮ ಎಂಬೆಡ್ಗಳ ಬಳಕೆಯ ನಿಯಮಗಳನ್ನೂ ಒಪ್ಪಿಕೊಳ್ಳಬೇಕು.
-
ನೀವು ನಮ್ಮ ಜಾಹೀರಾತುಗಳ API ಬಳಸಿದರೆ, ನಮ್ಮ ಜಾಹೀರಾತುಗಳ API ನಿಯಮಗಳಿಗೆ ಕೂಡ ಒಪ್ಪಿಕೊಳ್ಳಬೇಕು.
ಡೆವಲಪರ್ ಸೇವೆಗಳಿಗೆ ಸಂಬಂಧಿಸಿದ ಎಲ್ಲಾ ಹೆಚ್ಚುವರಿ ನಿಯಮಗಳು, ಈ ಉಲ್ಲೇಖದ ಮೂಲಕ ಡೆವಲಪರ್ ನಿಯಮಗಳ ಭಾಗವಾಗುತ್ತವೆ. ಹೆಚ್ಚುವರಿ ನಿಯಮಗಳು ಮತ್ತು ಡೆವಲಪರ್ ನಿಯಮಗಳ ನಡುವೆ ಯಾವುದೇ ವ್ಯತ್ಯಾಸವಿದ್ದರೆ, ನೀವು ಬಳಸುತ್ತಿರುವ ಸಂಬಂಧಿತ ಡೆವಲಪರ್ ಸೇವೆಗಳಿಗೆ ಹೆಚ್ಚುವರಿ ನಿಯಮಗಳೇ ಅನ್ವಯಿಸುತ್ತವೆ.
3. ನಿಮ್ಮ ಆಪ್ ಮತ್ತು ಆಪ್ನಲ್ಲಿರುವ ವಿಷಯ
3.1 ಆಪ್ ಪರಿಶೀಲನೆ
ನಿಮ್ಮ ಆಪ್ ಡೆವಲಪರ್ ದಾಖಲೆಗಳಲ್ಲಿ ತಿಳಿಸಿರುವ ಎಲ್ಲಾ ಸೂಚನೆಗಳು ಮತ್ತು ಅಗತ್ಯತೆಗಳನ್ನು ಪಾಲಿಸಬೇಕು. ನಿಮ್ಮ ಆಪ್ ಅನ್ನು Reddit ಪರಿಶೀಲಿಸಿ ಅನುಮೋದಿಸಬೇಕು ಎಂದು Reddit ತನ್ನ ಸ್ವಂತ ನಿರ್ಧಾರದಂತೆ ಕೇಳಬಹುದು ಎಂಬುದನ್ನು ನೀವು ಅರ್ಥಮಾಡಿಕೊಂಡು ಒಪ್ಪುತ್ತೀರಿ. ಇದನ್ನು (“ಆಪ್ ಪರಿಶೀಲನೆ”) ಎಂದು ಕರೆಯಲಾಗುತ್ತದೆ. ಡೆವಲಪರ್ ಪ್ಲಾಟ್ಫಾರ್ಮ್ ಮೂಲಕ ಆಪ್ ಅನ್ನು ಹಂಚುವ ಮೊದಲು, API ಬಳಕೆಯ ಮಿತಿಯನ್ನು ತಲುಪಿದ ನಂತರ ಅಥವಾ Reddit ತನ್ನ ಸ್ವಂತ ನಿರ್ಧಾರದಂತೆ ಯಾವುದೇ ಸಮಯದಲ್ಲಾದರೂ ಈ ಪರಿಶೀಲನೆಗೆ ನಿಮ್ಮ ಆಪ್ ಅನ್ನು ಸಲ್ಲಿಸುವಂತೆ Reddit ಕೇಳಬಹುದು. ಆಪ್ ಪರಿಶೀಲನೆಗೆ ಸಂಬಂಧಿಸಿದಂತೆ Reddit ಮಾಡುವ ಯಾವುದೇ ವಿನಂತಿಗಳಿಗೆ ನೀವು ಸಹಕರಿಸಬೇಕು, ತಕ್ಷಣ ಪ್ರತಿಕ್ರಿಯಿಸಬೇಕು ಮತ್ತು ಸಂಬಂಧಿಸಿದ ಮಾಹಿತಿಯನ್ನು ಒದಗಿಸಬೇಕು ಎಂದು ಒಪ್ಪುತ್ತೀರಿ. ನೀವು ಆಪ್ ಅನ್ನು ಪರಿಶೀಲನೆಗಾಗಿ ಸಲ್ಲಿಸಿದಾಗ, ನಿಮ್ಮ ಆಪ್ ನಮ್ಮ Devvit ನಿಯಮಗಳನ್ನು ಪಾಲಿಸುತ್ತದೆಯೇ ಎಂಬುದನ್ನು ಪರಿಶೀಲಿಸಲು Reddit ಮಾನವ ಪರಿಶೀಲನೆ ಮತ್ತು ಸ್ವಯಂಚಾಲಿತ ಪರಿಶೀಲನೆ ಎರಡನ್ನೂ ಬಳಸಲು ನೀವು ಅನುಮತಿಸುತ್ತೀರಿ. ಇದರಲ್ಲಿ ಮೂರನೇ ವ್ಯಕ್ತಿಗಳ LLM ಗಳ ಬಳಕೆಯೂ ಸೇರಿರಬಹುದು.
3.2 ಅಪ್ಲಿಕೇಶನ್ ಬಳಕೆದಾರರು
ನಿಮ್ಮ (ಆ್ಯಪ್ನ ಅಭಿವೃದ್ಧಿ ಸೇರಿದಂತೆ), ಕಾರ್ಯನಿರ್ವಹಣೆ, ನಿರ್ವಹಣೆ, ಸಹಾಯ, ಹಂಚಿಕೆ, ಬಳಕೆ ಮತ್ತು ಆ್ಯಪ್ನಲ್ಲಿರುವ ವಿಷಯಕ್ಕೆ (ಕೆಳಗೆ ವಿವರಿಸಿರುವಂತೆ) ಸಂಪೂರ್ಣ ಜವಾಬ್ದಾರಿ ನಿಮ್ಮದೇ. ನಿಮ್ಮ ಆ್ಯಪ್ ಬಳಸುವವರು (“ಆ್ಯಪ್ ಬಳಕೆದಾರರು”) ಅನ್ವಯವಾಗುವ ಎಲ್ಲ ಕಾನೂನುಗಳು ಮತ್ತು ನಿಯಮಗಳನ್ನು ಹಾಗೂ ನಮ್ಮ ಬಳಕೆದಾರರ ಒಪ್ಪಂದವನ್ನು ಪಾಲಿಸುವಂತೆ ನೀವು ನೋಡಿಕೊಳ್ಳಬೇಕು. ನಿಮ್ಮ ಆ್ಯಪ್ ಬಳಸುವವರು ನಮ್ಮ ಬಳಕೆದಾರರ ಒಪ್ಪಂದ ಅಥವಾ ಡೆವಲಪರ್ ನಿಯಮಗಳನ್ನು ಉಲ್ಲಂಘಿಸಲು ಅವಕಾಶ ನೀಡಬಾರದು, ಸಹಾಯ ಮಾಡಬಾರದು ಅಥವಾ ಅಂತಹ ಉಲ್ಲಂಘನೆಗೆ ಕಾರಣವಾಗುವಂತೆ ನಿಮ್ಮ ಆ್ಯಪ್ ಅನ್ನು ಬಳಸಲು ಬಿಡಬಾರದು.
ನಿಮ್ಮ ಆ್ಯಪ್ ಬಳಸುವವರಿಗೆ ಅನ್ವಯಿಸುವ ಪ್ರತ್ಯೇಕ ಸೇವಾ ನಿಯಮಗಳು ಅಥವಾ ಬೇರೆ ಒಪ್ಪಂದವನ್ನು ನೀವು ಹೊಂದಿದ್ದರೆ, ಆ ನಿಯಮಗಳು ಅಥವಾ ಒಪ್ಪಂದವು: (a) ನಿಮ್ಮ ಮತ್ತು ಆ್ಯಪ್ ಬಳಕೆದಾರರ ನಡುವಿನದ್ದೇ ಆಗಿರಬೇಕು. ಅದರ ಅಡಿಯಲ್ಲಿ Reddit ಗೆ ಯಾವುದೇ ಜವಾಬ್ದಾರಿ ಅಥವಾ ಹೊಣೆಗಾರಿಕೆ ಇರುವುದಿಲ್ಲ; ಮತ್ತು (b) ಡೆವಲಪರ್ ನಿಯಮಗಳು ಅಥವಾ ನಮ್ಮ ಬಳಕೆದಾರರ ಒಪ್ಪಂದವನ್ನು ಬದಲಾಯಿಸುವಂತೆಯೂ, ಅವುಗಳಿಗೆ ವಿರುದ್ಧವಾಗಿರುವಂತೆಯೂ ಇರಬಾರದು. ನಿಮ್ಮ ನಿಯಮಗಳು ಅಥವಾ ಆ್ಯಪ್ ಬಳಕೆದಾರರ ಒಪ್ಪಂದದಲ್ಲಿ ಯಾವುದೇ ವ್ಯತ್ಯಾಸ ಅಥವಾ ವಿರೋಧಾಭಾಸ ಇದ್ದರೆ, ಬಳಕೆದಾರರ ಒಪ್ಪಂದ ಮತ್ತು ನಮ್ಮ ಬಳಕೆದಾರರ ಒಪ್ಪಂದವೇ ಅನ್ವಯವಾಗುತ್ತವೆ.
3.3 ವಿಷಯವನ್ನು ತೆಗೆದುಹಾಕುವುದು
ನಮ್ಮ ನಿಯಮಗಳು ಮತ್ತು ನೀತಿಗಳ ಪ್ರಕಾರ, ನಮ್ಮ Reddit ನಿಯಮಗಳು ಸೇರಿದಂತೆ, ಬಳಕೆದಾರರ ವಿಷಯವನ್ನು ತೆಗೆದುಹಾಕುವಂತೆ ನಿಮಗೆ ಸೂಚನೆಗಳು ಅಥವಾ ವಿನಂತಿಗಳು ಬರಬಹುದು. ಇಂತಹ ವಿನಂತಿಗಳನ್ನು ನೀವು Reddit ಗೆ ತಿಳಿಸಲು, ಆ ವಿನಂತಿಯನ್ನು ಇಲ್ಲಿ ಸಲ್ಲಿಸಬೇಕು.
ಇದಲ್ಲದೆ, ಯಾವುದೇ ಬಳಕೆದಾರರ ವಿಷಯವನ್ನು ನಮ್ಮ ಸೇವೆಗಳಿಂದ ಅಳಿಸಿದರೆ, ಅದಕ್ಕೆ ವಿಶೇಷ ರಕ್ಷಣೆ ನೀಡಿದರೆ, ಅಮಾನತುಗೊಳಿಸಿದರೆ, ತಡೆಹಿಡಿದರೆ, ಬದಲಾಯಿಸಿದರೆ ಅಥವಾ ತೆಗೆದುಹಾಕಿದರೆ, ನಮ್ಮ ಸೇವೆಗಳಲ್ಲಿ ಆ ಬದಲಾವಣೆ ಆದ ತಕ್ಷಣ ಅಥವಾ Reddit (ಅಥವಾ ತಮ್ಮ ಬಳಕೆದಾರರ ವಿಷಯಕ್ಕೆ ಸಂಬಂಧಿಸಿದಂತೆ ಆ ಬಳಕೆದಾರರು) ಲಿಖಿತವಾಗಿ ಹಾಗೆ ಮಾಡಲು ಕೇಳಿದ ನಂತರ ಸಾಧ್ಯವಾದಷ್ಟು ಬೇಗ, ಆ ಬಳಕೆದಾರರ ವಿಷಯವನ್ನು ಮತ್ತು ಅಗತ್ಯವಿದ್ದರೆ ಅದಕ್ಕೆ ಸಂಬಂಧಿಸಿದ ಆ್ಯಪ್ನ ವಿಷಯವನ್ನೂ (ಕೆಳಗೆ ವಿವರಿಸಿರುವಂತೆ) ಅಳಿಸಬೇಕು ಅಥವಾ ಬದಲಾಯಿಸಬೇಕು. ಅನ್ವಯವಾಗುವ ಕಾನೂನು ಅಥವಾ ನಿಯಮಗಳು ಇದನ್ನು ನಿಷೇಧಿಸಿದರೆ, Reddit ನ ಸ್ಪಷ್ಟ ಲಿಖಿತ ಅನುಮತಿ ಇಲ್ಲದೆ ಹೀಗೆ ಮಾಡಬಾರದು.
ನಿಮ್ಮ ಆ್ಯಪ್ನಲ್ಲಿ ಆ್ಯಪ್ ಬಳಕೆದಾರರು ಅಥವಾ ಇತರ ಮೂರನೇ ವ್ಯಕ್ತಿಗಳು ಸಲ್ಲಿಸಿದ ಅಥವಾ ನೀಡಿದ ವಿಷಯವಿದ್ದರೆ, ಕಾನೂನುಬಾಹಿರ ಅಥವಾ ಹಕ್ಕು ಉಲ್ಲಂಘಿಸುವ ವಿಷಯದ ಕುರಿತು ಬರುವ ದೂರುಗಳಿಗೆ ಸೂಕ್ತವಾದ ಸೂಚನೆ ಮತ್ತು ತೆಗೆದುಹಾಕುವ ಪ್ರಕ್ರಿಯೆಯನ್ನು ನೀವು ಹೊಂದಿರಬೇಕು. ಜೊತೆಗೆ, ಅಮೆರಿಕದ ಡಿಜಿಟಲ್ ಮಿಲೇನಿಯಂ ಕಾಪಿರೈಟ್ ಕಾಯ್ದೆ (DMCA) ಮತ್ತು ಯುರೋಪಿಯನ್ ಒಕ್ಕೂಟದ ಡಿಜಿಟಲ್ ಸೇವೆಗಳ ಕಾಯ್ದೆ ಮತ್ತು ನಿಯಮಗಳು ಸೇರಿದಂತೆ, ಇಂತಹ ದೂರುಗಳಿಗೆ ಸಂಬಂಧಿಸಿದ ಎಲ್ಲ ಅನ್ವಯವಾಗುವ ಕಾನೂನು ಮತ್ತು ನಿಯಮಗಳನ್ನು ಪಾಲಿಸಬೇಕು.
3.4 Devvit ಆ್ಯಪ್ಗಳು
ನಿಮ್ಮ ಆ್ಯಪ್ನ ಸ್ವರೂಪವನ್ನು ಅವಲಂಬಿಸಿ, ಅದನ್ನು ನಮ್ಮ ಡೆವಲಪರ್ ಪ್ಲ್ಯಾಟ್ಫಾರ್ಮ್ನಲ್ಲಿ ನಡೆಸಿ ಹೋಸ್ಟ್ ಮಾಡುವುದು ನಿಮಗೆ ಬೇಕಾಗಬಹುದು. Reddit ಕೂಡ ಹಾಗೆ ಮಾಡುವಂತೆ ಕೇಳಬಹುದು. (ಅಂತಹ ಆ್ಯಪ್ ಅನ್ನು “Devvit ಆ್ಯಪ್” ಎಂದು ಕರೆಯಲಾಗುತ್ತದೆ). ನಿಮ್ಮ Devvit ಆ್ಯಪ್ ನಮ್ಮ Devvit ಡೆವಲಪರ್ ದಾಖಲಾತಿ (ನಮ್ಮ Devvit ಮಾರ್ಗಸೂಚಿಗಳು ಸೇರಿದಂತೆ) ಅನ್ನು ಪಾಲಿಸಬೇಕು. ಜೊತೆಗೆ, ನೀವು Reddit ಗೆ ಕೆಳಗಿನ ಹಕ್ಕುಗಳನ್ನು (“ಡೆವಲಪರ್ ಪರವಾನಗಿ”) ನೀಡುತ್ತೀರಿ;
-
ಡೆವಲಪರ್ ಪ್ಲ್ಯಾಟ್ಫಾರ್ಮ್, ನಮ್ಮ ಸೇವೆಗಳನ್ನು ನಿರ್ವಹಿಸುವುದು, ಅಭಿವೃದ್ಧಿಪಡಿಸುವುದು ಮತ್ತು ಬಳಕೆದಾರರಿಗೆ ಒದಗಿಸುವುದು, ಹಾಗೂ Reddit ಮತ್ತು ನಮ್ಮ ಸೇವೆಗಳನ್ನು ಪ್ರಚಾರ ಮಾಡುವ ಉದ್ದೇಶಕ್ಕಾಗಿ, ನಿಮ್ಮ Devvit ಆ್ಯಪ್ಗೆ (ಮತ್ತು ನೀವು ನಿಮ್ಮ Devvit ಆ್ಯಪ್ ಅಥವಾ ಡೆವಲಪರ್ ಸೇವೆಗಳ ಮೂಲಕ ಸೇವೆಗಳಿಗೆ ನೀಡುವ, ಸೇರಿಸುವ ಅಥವಾ Reddit ಅಥವಾ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡುವ ಯಾವುದೇ ಡೇಟಾ, ಮಾಹಿತಿ, ಸಾಫ್ಟ್ವೇರ್, ಕೋಡ್, ತಂತ್ರಜ್ಞಾನ, ವಸ್ತುಗಳು, Devvit ಸರಕುಗಳು (ಕೆಳಗೆ ವಿವರಿಸಿದಂತೆ) ಅಥವಾ ಇತರ ನಿಮ್ಮದೇ ಅಥವಾ ಮೂರನೇ ವ್ಯಕ್ತಿಯ ವಿಷಯಕ್ಕೆ Reddit ಗೆ ಹಕ್ಕುಗಳನ್ನು ನೀಡುತ್ತೀರಿ: ಇತರರಿಗೆ ವಿಶೇಷ ಹಕ್ಕು ನೀಡದ, ವರ್ಗಾಯಿಸಬಹುದಾದ, ಉಪಪರವಾನಗಿ ನೀಡಬಹುದಾದ, ರಾಯಲ್ಟಿ-ಮುಕ್ತ, ವಿಶ್ವವ್ಯಾಪಿ ಮತ್ತು ಹಿಂಪಡೆಯಬಹುದಾದ ಪರವಾನಗಿ. ಈ ಪರವಾನಗಿಯಡಿ Reddit ನಿಮ್ಮ Devvit ಆ್ಯಪ್ ಮತ್ತು ಅದರಲ್ಲಿರುವ ವಿಷಯವನ್ನು ಪ್ರವೇಶಿಸಬಹುದು, ಪೋಸ್ಟ್ ಮಾಡಬಹುದು, ಸಾರ್ವಜನಿಕವಾಗಿ ಪ್ರದರ್ಶಿಸಬಹುದು ಮತ್ತು ಬಳಸಬಹುದು; ಹಂಚಬಹುದು, ನಕಲು ಮಾಡಬಹುದು, ಬದಲಾಯಿಸಬಹುದು, ಹೋಸ್ಟ್ ಮಾಡಬಹುದು, ಅನುವಾದಿಸಬಹುದು, ಸಂಗ್ರಹಿಸಬಹುದು ಮತ್ತು ಇತರ ರೀತಿಯಲ್ಲೂ ಬಳಸಬಹುದು. (ಇವುಗಳನ್ನು ಒಟ್ಟಾಗಿ “ಆ್ಯಪ್ ವಿಷಯ” ಎಂದು ಕರೆಯಲಾಗುತ್ತದೆ)).
-
Reddit ಗೆ ನೀಡಿರುವ ನಿಮ್ಮ ಪರವಾನಗಿಯ ಭಾಗವಾಗಿ, ನಿಮ್ಮ Devvit ಆ್ಯಪ್ನಲ್ಲಿರುವ ಆ್ಯಪ್ ವಿಷಯವನ್ನು (Devvit ಸರಕುಗಳು ಸೇರಿದಂತೆ) Reddit ಬಳಕೆದಾರರಿಗೆ ಉಪಪರವಾನಗಿ ನೀಡಬಹುದು ಎಂಬುದಕ್ಕೂ ನೀವು ಒಪ್ಪುತ್ತೀರಿ. Devvit ಆ್ಯಪ್ ಅನ್ನು ತಯಾರಿಸಲು, ಹಂಚಲು ಮತ್ತು ನಡೆಸಲು, ಬಳಕೆದಾರರು ನಿಮ್ಮ Devvit ಆ್ಯಪ್ನಿಂದ ಆ್ಯಪ್ ವಿಷಯವನ್ನು (Devvit ಸರಕುಗಳು ಸೇರಿದಂತೆ) ಪಡೆದು ಬಳಸಲು, ಹಾಗೂ Devvit ಆ್ಯಪ್, Reddit ಸೇವೆಗಳು ಮತ್ತು ಡೇಟಾ ಮತ್ತು Reddit ಅನ್ನು ಪ್ರಚಾರ ಮಾಡಲು, ಮಾರುಕಟ್ಟೆ ಮಾಡಲು ಮತ್ತು ಜಾಹೀರಾತು ಮಾಡಲು ಅಗತ್ಯವಿರುವ ಮಟ್ಟಿಗೆ, Reddit ತನ್ನ ಸಾಮಾನ್ಯ ಕಾರ್ಯಾಚರಣೆಯ ಭಾಗವಾಗಿ ಈ ಉಪಪರವಾನಗಿಯನ್ನು ನೀಡಬಹುದು.
Devvit ಆ್ಯಪ್ಗಳು ಮತ್ತು ಅವುಗಳ ಹೊಸ ಆವೃತ್ತಿಗಳು App ಪರಿಶೀಲನೆಗೆ ಒಳಪಟ್ಟಿರುತ್ತವೆ. ಅವು ನಮ್ಮ Devvit ಡೆವಲಪರ್ ದಾಖಲಾತಿ (Devvit ಮಾರ್ಗಸೂಚಿಗಳು ಸೇರಿದಂತೆ) ಮತ್ತು ಡೆವಲಪರ್ ನಿಯಮಗಳ ಅಡಿಯಲ್ಲಿ ಆ್ಯಪ್ಗಳಿಗೆ ಅನ್ವಯವಾಗುವ ಎಲ್ಲ ನಿಯಮಗಳು ಮತ್ತು ಷರತ್ತುಗಳನ್ನು ಪಾಲಿಸಬೇಕು.
ನಿಮ್ಮ Devvit ಆ್ಯಪ್ ಮೂಲಕ ಇತರ ಬಳಕೆದಾರರಿಗೆ ಕೆಲವು ಡಿಜಿಟಲ್ ಅವತಾರಗಳು, ವಸ್ತುಗಳು, ಡಿಜಿಟಲ್ ಕರೆನ್ಸಿ, ಐಟಂಗಳು, ಉತ್ಪನ್ನಗಳು ಅಥವಾ ಫೀಚರ್ಗಳನ್ನು ನೀಡುವ ಮೂಲಕ ನಿಮ್ಮ Devvit ಆ್ಯಪ್ನಿಂದ ಆದಾಯ ಗಳಿಸಬಹುದು. (ಇವುಗಳನ್ನು ಒಟ್ಟಾಗಿ “Devvit ಸರಕುಗಳು” ಎಂದು ಕರೆಯಲಾಗುತ್ತದೆ). ಹೆಚ್ಚಿನ ಮಾಹಿತಿಗಾಗಿ ನಮ್ಮ ಗಳಿಕೆಯ ನಿಯಮಗಳು ಮತ್ತು ಗಳಿಕೆ ನೀತಿ ನೋಡಿ.
ಡೆವಲಪರ್ ನಿಯಮಗಳು ಮುಕ್ತಾಯವಾದ ನಂತರವೂ, ನಿಮ್ಮ Devvit ಆ್ಯಪ್ನಲ್ಲಿರುವ ಆ್ಯಪ್ ವಿಷಯಕ್ಕೆ (Devvit ಸರಕುಗಳು ಸೇರಿದಂತೆ) Redditಗೆ ನೀಡಿರುವ ನಿಮ್ಮ ಪರವಾನಗಿ ಮುಂದುವರಿಯುತ್ತದೆ. ಜೊತೆಗೆ, ಮಾಡರೇಟರ್ಗಳಾಗಿರುವ ಬಳಕೆದಾರರು ಸಮಂಜಸವಾದ ಬದಲಾವಣೆ ಅವಧಿಯವರೆಗೆ ನಿಮ್ಮ Devvit ಆ್ಯಪ್ ಅನ್ನು ಪ್ರವೇಶಿಸಿ ಬಳಸುವುದನ್ನು ಮುಂದುವರಿಸಬಹುದು.
ನೀವು ನಿಗದಿಪಡಿಸಿರುವ ಬಳಕೆ ಮಿತಿಗಳನ್ನು ಮೀರಿದರೆ ಅಥವಾ ಡೆವಲಪರ್ ಪ್ಲ್ಯಾಟ್ಫಾರ್ಮ್ನ ದರದ ಮಿತಿಯನ್ನು ನಿಯಂತ್ರಿಸುವ (ಇತರ ನಿಯಂತ್ರಣಗಳನ್ನು ತಪ್ಪಿಸಲು ಪ್ರಯತ್ನಿಸಿದ್ದೀರಿ ಎಂದು Reddit ಭಾವಿಸಿದರೆ), ನಿಮ್ಮ Devvit ಆ್ಯಪ್ ಮತ್ತು ಡೆವಲಪರ್ ಪ್ಲ್ಯಾಟ್ಫಾರ್ಮ್ ಹಾಗೂ ಇತರ Reddit ಸೇವೆಗಳು ಮತ್ತು ಡೇಟಾವನ್ನು ಬಳಸುವ ನಿಮ್ಮ ಅವಕಾಶವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಬಹುದು ಅಥವಾ ಶಾಶ್ವತವಾಗಿ ಬ್ಲಾಕ್ ಮಾಡಬಹುದು. Reddit ತನ್ನ ಸ್ವಂತ ನಿರ್ಧಾರದ ಮೇರೆಗೆ, ಯಾವುದೇ ಮುಂಚಿತ ಸೂಚನೆ ನೀಡದೆ, ಯಾವಾಗ ಬೇಕಾದರೂ ನಿಮ್ಮ Devvit ಆ್ಯಪ್ ಅನ್ನು ಡೆವಲಪರ್ ಪ್ಲ್ಯಾಟ್ಫಾರ್ಮ್ನಿಂದ ತೆಗೆದುಹಾಕಬಹುದು.
4. ಬಳಕೆಯ ಮೇಲಿನ ನಿರ್ಬಂಧಗಳು
4.1 ವಾಣಿಜ್ಯ ಬಳಕೆಯ ನಿರ್ಬಂಧಗಳು
Reddit ಸೇವೆಗಳು ಮತ್ತು ಡೇಟಾವನ್ನು ಪ್ರವೇಶಿಸಲು ಹಾಗೂ ಬಳಸಲು ಶುಲ್ಕ ವಿಧಿಸುವ ಹಕ್ಕನ್ನು Reddit ಕಾಯ್ದಿರಿಸಿಕೊಂಡಿದೆ. ಶುಲ್ಕದ ದರಗಳನ್ನು Reddit ತನ್ನ ಸ್ವಂತ ನಿರ್ಧಾರದಂತೆ ನಿಗದಿಪಡಿಸುತ್ತದೆ. ಡೆವಲಪರ್ ನಿಯಮಗಳು ಅಥವಾ ಅನ್ವಯಿಸುವ ಹೆಚ್ಚುವರಿ ನಿಯಮಗಳಲ್ಲಿ ಸ್ಪಷ್ಟವಾಗಿ ಅನುಮತಿಸಿರುವುದನ್ನು ಹೊರತುಪಡಿಸಿ, ಅಥವಾ ನಮ್ಮಿಂದ ಲಿಖಿತ ಅನುಮತಿ ಪಡೆದಿರುವುದನ್ನು ಹೊರತುಪಡಿಸಿ, ನೀವು ಯಾವುದೇ ವ್ಯವಹಾರದ ಪರವಾಗಿ (ನಿಮ್ಮ ಆಪ್ ಮೂಲಕವೂ ಸೇರಿದಂತೆ):
-
ಅಥವಾ ಹಣ ಗಳಿಸುವ ಸೇವೆ ಅಥವಾ ಉತ್ಪನ್ನದ ಭಾಗವಾಗಿ Reddit ಸೇವೆಗಳು ಮತ್ತು ಡೇಟಾವನ್ನು ಪ್ರವೇಶಿಸಬಾರದು ಅಥವಾ ಬಳಸಬಾರದು. ಹಾಗೆ ಮಾಡಲು ಪ್ರಯತ್ನಿಸಬಾರದು, ಅಥವಾ ನಿಮ್ಮ ಆಪ್ ಮೂಲಕ ಇತರರಿಗೆ ಅದನ್ನು ಮಾಡಲು ಅವಕಾಶ ನೀಡಬಾರದು ಅಥವಾ ಸಹಾಯ ಮಾಡಬಾರದು; ಅಥವಾ
-
Reddit ಸೇವೆಗಳು ಮತ್ತು ಡೇಟಾದ ಯಾವುದೇ ಭಾಗವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಮಾರಾಟ ಮಾಡುವುದು, ಬಾಡಿಗೆಗೆ ನೀಡುವುದು, ಉಪಪರವಾನಗಿ ನೀಡುವುದು, ಹಣ ಗಳಿಸುವುದು ಅಥವಾ ಬೇರೆ ಯಾವುದೇ ರೀತಿಯಲ್ಲಿ ಅದರಿಂದ ಯಾವುದೇ ರೀತಿಯ ಆದಾಯ ಪಡೆಯುವುದು ಅಥವಾ ಗಳಿಸುವುದು ಮಾಡಬಾರದು. ಇದರಲ್ಲಿ ಮೇಲಿನ ವಿಷಯಗಳಿಂದ ಪಡೆದ ಯಾವುದೇ ಡೇಟಾದಿಂದ ಆದಾಯ ಪಡೆಯುವುದೂ ಸೇರಿದೆ.
Reddit ಸೇವೆಗಳು ಮತ್ತು ಡೇಟಾವನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲು, ನಿಗದಿಪಡಿಸಿರುವ ದರದ ಮಿತಿಗಿಂತ ಹೆಚ್ಚಿನ ಸಂಶೋಧನೆ ಮಾಡಲು ಅಥವಾ ಡೆವಲಪರ್ ನಿಯಮಗಳಲ್ಲಿ ಸ್ಪಷ್ಟವಾಗಿ ಅನುಮತಿಸದ ಯಾವುದೇ ಉದ್ದೇಶಕ್ಕಾಗಿ ಬಳಸಲು ನೀವು ಆಸಕ್ತಿ ಹೊಂದಿದ್ದರೆ, Reddit ಜೊತೆ ಪ್ರತ್ಯೇಕ ಒಪ್ಪಂದ ಮಾಡಿಕೊಳ್ಳಬೇಕು.
ನಿರ್ಬಂಧಿತ ವಾಣಿಜ್ಯ ಬಳಕೆಯ ಕುರಿತು ಹೆಚ್ಚಿನ ಮಾಹಿತಿ ಮತ್ತು ಉದಾಹರಣೆಗಳಿಗಾಗಿ, ನಮ್ಮ ಡೆವಲಪರ್ ದಾಖಲೆಗಳನ್ನು ಇಲ್ಲಿ ಪರಿಶೀಲಿಸಿ.
4.2 ಇತರ ಬಳಕೆಯ ನಿರ್ಬಂಧಗಳು
ನೀವು ಈ ಕೆಳಗಿನವುಗಳನ್ನು ಮಾಡಬಾರದು, ಮಾಡಲು ಪ್ರಯತ್ನಿಸಬಾರದು ಅಥವಾ (ನಿಮ್ಮ ಆಪ್ ಮೂಲಕವೂ ಸೇರಿದಂತೆ) ಇತರರಿಗೆ ಮಾಡಲು ಅವಕಾಶ ನೀಡಬಾರದು ಅಥವಾ ಸಹಾಯ ಮಾಡಬಾರದು:
-
Reddit ಸೇವೆಗಳು ಮತ್ತು ಡೇಟಾವನ್ನು ಕಾನೂನುಬಾಹಿರ ಚಟುವಟಿಕೆಗಳನ್ನು ಅಥವಾ ಇತರರ ಹಕ್ಕುಗಳ ಉಲ್ಲಂಘನೆಯನ್ನು ಪ್ರೋತ್ಸಾಹಿಸಲು ಅಥವಾ ಪ್ರಚಾರ ಮಾಡಲು ಬಳಸಬಾರದು;
-
ಅನ್ವಯಿಸುವ ಕಾನೂನುಗಳ ಪ್ರಕಾರ ಈ ನಿರ್ಬಂಧವನ್ನು ವಿಧಿಸಲು ಸಾಧ್ಯವಿಲ್ಲದ ಸಂದರ್ಭಗಳನ್ನು ಹೊರತುಪಡಿಸಿ, Reddit ಸೇವೆಗಳು ಮತ್ತು ಡೇಟಾದಲ್ಲಿರುವ ಅಥವಾ ಅವುಗಳ ಆಧಾರವಾಗಿರುವ ಮೂಲ ಕೋಡ್, ವ್ಯಾಪಾರ ರಹಸ್ಯಗಳು ಅಥವಾ ತಾಂತ್ರಿಕ ಮಾಹಿತಿಯನ್ನು ರಿವರ್ಸ್ ಎಂಜಿನಿಯರಿಂಗ್ ಮಾಡುವುದು, ಡಿಕಂಪೈಲ್ ಮಾಡುವುದು, ಡಿಸ್ಅಸೆಂಬಲ್ ಮಾಡುವುದು, ಭಾಷಾಂತರಿಸುವುದು ಅಥವಾ ಬೇರೆ ಯಾವುದೇ ರೀತಿಯಲ್ಲಿ ಪಡೆಯಲು ಪ್ರಯತ್ನಿಸಬಾರದು;
-
Reddit ತನ್ನ ಸ್ವಂತ ನಿರ್ಧಾರದಂತೆ ನಿಗದಿಪಡಿಸುವ ಅಥವಾ ಡೆವಲಪರ್ ದಾಖಲೆಗಳಲ್ಲಿ ತಿಳಿಸಿರುವ, Reddit ಸೇವೆಗಳು ಮತ್ತು ಡೇಟಾಗೆ ಮಾಡುವ ವಿನಂತಿಗಳು ಮತ್ತು ಅವುಗಳ ಬಳಕೆಯ ಮೇಲಿನ ಸಮಂಜಸವಾದ ಮಿತಿಗಳನ್ನು ತಪ್ಪಿಸಿಕೊಳ್ಳಬಾರದು ಅಥವಾ ಮೀರಬಾರದು. ಹಾಗೆಯೇ, Reddit ಸೇವೆಗಳು ಮತ್ತು ಡೇಟಾದ ಅತಿಯಾದ ಅಥವಾ ದುರುಪಯೋಗದ ಬಳಕೆಯಾಗುತ್ತದೆ ಎಂದು Reddit ಭಾವಿಸುವ ರೀತಿಯಲ್ಲಿ, ಅಥವಾ Reddit ಸೇವೆಗಳು ಮತ್ತು ಡೇಟಾವನ್ನು ಒದಗಿಸುವ ಯಾವುದೇ ಸರ್ವರ್ಗಳು, ನೆಟ್ವರ್ಕ್ಗಳು ಅಥವಾ ವ್ಯವಸ್ಥೆಗಳಿಗೆ ತೊಂದರೆ ಉಂಟುಮಾಡುವ ಅಥವಾ ಅವುಗಳ ಕಾರ್ಯಕ್ಕೆ ಅಸಮಂಜಸವಾಗಿ ಅಡ್ಡಿಪಡಿಸುವ ರೀತಿಯಲ್ಲಿ Reddit ಸೇವೆಗಳು ಮತ್ತು ಡೇಟಾವನ್ನು ಬಳಸಬಾರದು;
-
Reddit ಸೇವೆಗಳು ಮತ್ತು ಡೇಟಾವನ್ನು ನೀವು ಹೇಗೆ ಅಥವಾ ಏಕೆ ಪ್ರವೇಶಿಸುತ್ತೀರಿ ಅಥವಾ ಬಳಸುತ್ತೀರಿ ಎಂಬುದನ್ನು ತಪ್ಪಾಗಿ ತೋರಿಸಬಾರದು ಅಥವಾ ಮರೆಮಾಡಬಾರದು. (ಒಂದೇ ಬಳಕೆಯ ಉದ್ದೇಶಕ್ಕಾಗಿ ಅಥವಾ ಬಹುತೇಕ ಒಂದೇ ರೀತಿಯ ಅಥವಾ ಒಂದಕ್ಕೊಂದು ಹೊಂದಿಕೊಂಡಿರುವ ಬಳಕೆಯ ಉದ್ದೇಶಗಳಿಗಾಗಿ ಹಲವು ಆಪ್ಗಳನ್ನು ನೋಂದಾಯಿಸುವುದೂ ಇದರಲ್ಲಿ ಸೇರಿದೆ);
-
Reddit ಸೇವೆಗಳು ಮತ್ತು ಡೇಟಾದ ಯಾವುದೇ ಫೀಚರ್ ಅಥವಾ ಕಾರ್ಯಗಳನ್ನು ಅಡ್ಡಿಪಡಿಸಬಾರದು, ಬದಲಾಯಿಸಬಾರದು, ಅಸ್ತವ್ಯಸ್ತಗೊಳಿಸಬಾರದು ಅಥವಾ ನಿಷ್ಕ್ರಿಯಗೊಳಿಸಬಾರದು. ಇದರಲ್ಲಿ ಯಾವುದೇ ವೈಶಿಷ್ಟ್ಯ ಅಥವಾ ಕಾರ್ಯವನ್ನು ನಿರ್ಬಂಧಿಸಲು ಅಥವಾ ನಿಯಂತ್ರಿಸಲು ಬಳಸುವ ವ್ಯವಸ್ಥೆಗಳೂ ಸೇರಿವೆ. ಹಾಗೆಯೇ, Reddit ಸೇವೆಗಳು ಮತ್ತು ಡೇಟಾದ ಯಾವುದೇ ಸಾಫ್ಟ್ವೇರ್ ರಕ್ಷಣೆ ಅಥವಾ ಮೇಲ್ವಿಚಾರಣಾ ವ್ಯವಸ್ಥೆಯನ್ನು ಸೋಲಿಸಬಾರದು, ತಪ್ಪಿಸಿಕೊಳ್ಳಬಾರದು, ಅಡ್ಡದಾರಿ ಹಿಡಿಯಬಾರದು, ತೆಗೆದುಹಾಕಬಾರದು, ನಿಷ್ಕ್ರಿಯಗೊಳಿಸಬಾರದು ಅಥವಾ ಬೇರೆ ಯಾವುದೇ ರೀತಿಯಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಬಾರದು;
-
ಯಾವುದೇ ವೈರಸ್ಗಳು, ವರ್ಮ್ಗಳು, ದೋಷಗಳು, ಟ್ರೋಜನ್ ಹಾರ್ಸ್ಗಳು, ಹಾನಿಕಾರಕ ಸಾಫ್ಟ್ವೇರ್ ಅಥವಾ ಇತರ ಯಾವುದೇ ಹಾನಿಕಾರಕ ವಸ್ತುಗಳನ್ನು ಒಳಗೆ ಸೇರಿಸುವ ಉದ್ದೇಶದಿಂದ Reddit ಸೇವೆಗಳು ಮತ್ತು ಡೇಟಾವನ್ನು ಬಳಸಬಾರದು;
-
Reddit ಸೇವೆಗಳು ಮತ್ತು ಡೇಟಾದ ಯಾವುದೇ ಫೀಚರ್ಗಳು ಅಥವಾ ಕಾರ್ಯಗಳನ್ನು ಆಧರಿಸಿ ಹೊಸ ರೂಪಗಳನ್ನು ರಚಿಸಬಾರದು, ನಕಲಿಸಬಾರದು, ಮರುಉತ್ಪಾದಿಸಬಾರದು, ಮರುಹಂಚಿಕೆ ಮಾಡಬಾರದು, ಬಾಡಿಗೆಗೆ ನೀಡಬಾರದು, ಗುತ್ತಿಗೆಗೆ ನೀಡಬಾರದು, ಮಾರಾಟ ಮಾಡಬಾರದು ಅಥವಾ ಅವುಗಳ ಪ್ರವೇಶವನ್ನು ಇತರರಿಗೆ ಒದಗಿಸಿ ಆದಾಯ ಗಳಿಸಬಾರದು;
-
ನಮ್ಮ ಅನುಮತಿಯಿಲ್ಲದೆ, ದೊಡ್ಡ ಭಾಷಾ ಮಾದರಿಗಳು, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ ಇತರ ಅಲ್ಗಾರಿದಮ್ ಮಾದರಿಗಳು ಅಥವಾ ಅವುಗಳಿಗೆ ಸಂಬಂಧಿಸಿದ ಸೇವೆಗಳಿಗೆ ತರಬೇತಿ ನೀಡಲು Reddit ಸೇವೆಗಳು ಮತ್ತು ಡೇಟಾವನ್ನು ಯಾವುದೇ ರೀತಿಯಲ್ಲಿ ಪ್ರವೇಶಿಸಬಾರದು ಅಥವಾ ಬಳಸಬಾರದು. (ಇದರಲ್ಲಿ ನಮ್ಮ API ಮೂಲಕ ಪ್ರವೇಶಿಸುವುದು ಅಥವಾ Reddit ಸೇವೆಗಳು ಮತ್ತು ಡೇಟಾವನ್ನು ಸೂಚ್ಯಂಕಗೊಳಿಸುವುದು, ಸಂಗ್ರಹಿಸಿಡುವುದು ಅಥವಾ ಸ್ವಯಂಚಾಲಿತವಾಗಿ ಪರಿಶೀಲಿಸುವುದೂ ಸೇರಿದೆ);
-
Reddit ಸೇವೆಗಳು ಮತ್ತು ಡೇಟಾವನ್ನು ಯಾವುದೇ ಕಾನೂನುಬಾಹಿರ, ಅನುಮತಿಯಿಲ್ಲದ ಅಥವಾ ಮೋಸಗೊಳಿಸುವ, ಅನೈತಿಕ, ಸುಳ್ಳು, ದಾರಿತಪ್ಪಿಸುವ ಅಥವಾ ಅನುಚಿತ ಉದ್ದೇಶಕ್ಕಾಗಿ ಪ್ರವೇಶಿಸಬಾರದು ಅಥವಾ ಬಳಸಬಾರದು. ಹಾಗೆಯೇ, ಕಾನೂನುಬಾಹಿರ ಚಟುವಟಿಕೆಗಳನ್ನು ಅಥವಾ ಮೂರನೇ ವ್ಯಕ್ತಿಗಳ ಹಕ್ಕುಗಳ ಉಲ್ಲಂಘನೆಯನ್ನು ಪ್ರೋತ್ಸಾಹಿಸಲು ಅಥವಾ ಪ್ರಚಾರ ಮಾಡಲು ಬಳಸಬಾರದು. ಇದರಲ್ಲಿ ಕೆಳಗಿನ ರೀತಿಯ ಬಳಕೆಯೂ ಸೇರಿದೆ: (a) ಡೆವಲಪರ್ ನಿಯಮಗಳು, ಡೆವಲಪರ್ ದಾಖಲೆಗಳು ಮತ್ತು ನಮ್ಮ ಬಳಕೆದಾರರ ಒಪ್ಪಂದವನ್ನು ಪಾಲಿಸದಿರುವುದು; (b) Reddit ನ ಯಾವುದೇ ತಾಂತ್ರಿಕ ಪ್ರಕ್ರಿಯೆಗಳು ಅಥವಾ ಭದ್ರತಾ ಕ್ರಮಗಳನ್ನು ಹಾಳುಮಾಡುವುದು, ಉಲ್ಲಂಘಿಸುವುದು ಅಥವಾ ಅವುಗಳನ್ನು ತಪ್ಪಿಸಿಕೊಳ್ಳುವುದು; (c) ಬಳಕೆದಾರರು, Reddit, Reddit ಸೇವೆಗಳು ಮತ್ತು ಡೇಟಾ (ಅವುಗಳಿಗೆ ಸಂಬಂಧಿಸಿದ ಸರ್ವರ್ಗಳು, ನೆಟ್ವರ್ಕ್ಗಳು ಅಥವಾ ವ್ಯವಸ್ಥೆಗಳೂ ಸೇರಿದಂತೆ) ಅಥವಾ ಯಾವುದೇ ಮೂರನೇ ವ್ಯಕ್ತಿಗೆ ಭದ್ರತಾ ಅಪಾಯವನ್ನು ಉಂಟುಮಾಡುವುದು; (d) ಬಳಕೆದಾರರು, Reddit ಅಥವಾ ಯಾವುದೇ ಮೂರನೇ ವ್ಯಕ್ತಿಗೆ ಅನಗತ್ಯ ಸಂದೇಶಗಳನ್ನು ಕಳುಹಿಸಲು, ಪ್ರೋತ್ಸಾಹಿಸಲು ಅಥವಾ ಕಿರುಕುಳ ನೀಡಲು Reddit ಸೇವೆಗಳು ಮತ್ತು ಡೇಟಾವನ್ನು ಬಳಸುವುದು; ಅಥವಾ (e) ಕಾನೂನು ಜಾರಿ ಅಥವಾ ನಿಗಾ ಉದ್ದೇಶಗಳಿಗಾಗಿ Reddit ಸೇವೆಗಳು ಮತ್ತು ಡೇಟಾವನ್ನು ಬಳಸುವುದು; ಅಥವಾ
-
ನಮ್ಮ ಸಾರ್ವಜನಿಕ ಕಂಟೆಂಟ್ ನೀತಿಯನ್ನು ಉಲ್ಲಂಘಿಸುವ ಸಾಧ್ಯತೆ ಇರುವ ಯಾವುದೇ ರೀತಿಯ ವರ್ತನೆಯಲ್ಲಿ ತೊಡಗಬಾರದು. ಇದರಲ್ಲಿ Reddit ಡೇಟಾವನ್ನು ಪರವಾನಗಿ ಪಡೆದು ಬಳಸುವವರಿಗೆ ಅನ್ವಯಿಸುವ ನಿರ್ಬಂಧಗಳನ್ನು ಉಲ್ಲಂಘಿಸುವುದೂ ಸೇರಿದೆ.
5. ಬೌದ್ಧಿಕ ಆಸ್ತಿ
5.1 ಬೌದ್ಧಿಕ ಸ್ವತ್ತಿನ ಮಾಲೀಕತ್ವ
ಡೆವಲಪರ್ ನಿಯಮಗಳ ಉದ್ದೇಶಕ್ಕಾಗಿ:
-
“ಬೌದ್ಧಿಕ ಸ್ವತ್ತು” ಎಂದರೆ ಯಾವುದೇ ರೂಪದಲ್ಲಿರುವ ಎಲ್ಲಾ ತಂತ್ರಜ್ಞಾನ ಮತ್ತು ಬೌದ್ಧಿಕ ಸ್ವತ್ತು. ಇದರಲ್ಲಿ: (a) ಪ್ರಕಟಿತ ಮತ್ತು ಅಪ್ರಕಟಿತ ಬರಹಗಳು, ಆಡಿಯೋ-ವೀಡಿಯೋ ಕೃತಿಗಳು, ಸಂಗ್ರಹ ಕೃತಿಗಳು, ಕಂಪ್ಯೂಟರ್ ಪ್ರೋಗ್ರಾಂಗಳು (ಸೋರ್ಸ್ ಕೋಡ್ ಮತ್ತು ಆಬ್ಜೆಕ್ಟ್ ಕೋಡ್ ಸೇರಿದಂತೆ), ಸಂಗ್ರಹಣೆಗಳು, ಡೇಟಾಬೇಸ್ಗಳು, ಬದಲಾವಣೆ ಮಾಡಿ ರಚಿಸಿದ ಕೃತಿಗಳು ಮತ್ತು ಸಾಹಿತ್ಯ ಕೃತಿಗಳು, (b) ಆವಿಷ್ಕಾರಗಳು, ಅನ್ವೇಷಣೆಗಳು, ಸುಧಾರಣೆಗಳು, ಯಂತ್ರಗಳು, ವಿಧಾನಗಳು ಮತ್ತು ಪ್ರಕ್ರಿಯೆಗಳು, (c) ಟ್ರೇಡ್ಮಾರ್ಕ್ಗಳು ಮತ್ತು ವ್ಯಾಪಾರ ಹೆಸರುಗಳು, ಮತ್ತು (d) ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರದ ಅಥವಾ ಸರಿಯಾದ ವಿಧಾನಗಳ ಮೂಲಕ ಸುಲಭವಾಗಿ ತಿಳಿದುಕೊಳ್ಳಲು ಸಾಧ್ಯವಾಗದ ಮಾಹಿತಿ. ಇದರಲ್ಲಿ ಗ್ರಾಹಕರ ಪಟ್ಟಿಗಳು, ಆಲೋಚನೆಗಳು ಮತ್ತು ತಾಂತ್ರಿಕ ಜ್ಞಾನವೂ ಸೇರಿವೆ.
-
“ಬೌದ್ಧಿಕ ಸ್ವತ್ತಿನ ಹಕ್ಕುಗಳು” ಎಂದರೆ ಯಾವುದೇ ದೇಶ ಅಥವಾ ಪ್ರದೇಶದಲ್ಲಿ ಬೌದ್ಧಿಕ ಸ್ವತ್ತಿಗೆ ಸಂಬಂಧಿಸಿದ ಅಥವಾ ಅದರಿಂದ ಉಂಟಾಗುವ ಎಲ್ಲಾ ಹಕ್ಕುಗಳು. ಇದರಲ್ಲಿ ಪೇಟೆಂಟ್ ಹಕ್ಕುಗಳು, ಕಾಪಿರೈಟ್ ಹಕ್ಕುಗಳು, ಟ್ರೇಡ್ಮಾರ್ಕ್ ಹಕ್ಕುಗಳು, ಗೌಪ್ಯ ಮಾಹಿತಿಗೆ (ಕೆಳಗೆ ವಿವರಿಸಿರುವಂತೆ) ಸಂಬಂಧಿಸಿದ ಹಕ್ಕುಗಳು, ವ್ಯಕ್ತಿಯ ಹೆಸರು, ಧ್ವನಿ, ಸಹಿ, ಫೋಟೋ ಅಥವಾ ಅವರ ರೂಪಕ್ಕೆ ಸಂಬಂಧಿಸಿದ ಹಕ್ಕುಗಳು, ವೈಯಕ್ತಿಕ ಹಕ್ಕುಗಳು, ಗೌಪ್ಯತೆ ಮತ್ತು ಪ್ರಚಾರಕ್ಕೆ ಸಂಬಂಧಿಸಿದ ಹಕ್ಕುಗಳು, ನೈತಿಕ ಹಕ್ಕುಗಳು ಹಾಗೂ ಡೊಮೇನ್ ಹೆಸರಿನ ಹಕ್ಕುಗಳು ಸೇರಿವೆ.
ನೀವು ಮತ್ತು Reddit ಇಬ್ಬರೂ ಒಪ್ಪಿಕೊಳ್ಳುವುದೇನೆಂದರೆ, ನಿಮ್ಮ ಆಪ್ಗೆ ಸಂಬಂಧಿಸಿದ ಎಲ್ಲಾ ಹಕ್ಕು, ಮಾಲೀಕತ್ವ ಮತ್ತು ಸ್ವಾಮ್ಯ ನಿಮ್ಮದೇ ಆಗಿರುತ್ತದೆ. ಹಾಗೆಯೇ, Reddit ಸೇವೆಗಳು ಮತ್ತು ಡೇಟಾ, ಡೆವಲಪರ್ ದಾಖಲೆಗಳು, Reddit ಟ್ರೇಡ್ಮಾರ್ಕ್ಗಳು, Reddit ನ ಗೌಪ್ಯ ಮಾಹಿತಿ (ಕೆಳಗೆ ವಿವರಿಸಿರುವಂತೆ), Reddit ಗೆ ಸೇರಿದ ಇತರ ಬೌದ್ಧಿಕ ಸ್ವತ್ತು ಮತ್ತು ಬೌದ್ಧಿಕ ಸ್ವತ್ತಿನ ಹಕ್ಕುಗಳು ಹಾಗೂ ಮೇಲಿನ ಯಾವುದನ್ನಾದರೂ ಆಧರಿಸಿ ರಚಿಸಲಾದ ಬದಲಾಯಿಸಿದ ಕೃತಿಗಳ ಮೇಲಿನ ಎಲ್ಲಾ ಹಕ್ಕು, ಮಾಲೀಕತ್ವ ಮತ್ತು ಸ್ವಾಮ್ಯ Redditಗೇ ಸೇರಿರುತ್ತದೆ.
Reddit ಸೇವೆಗಳು ಮತ್ತು ಡೇಟಾ, ಡೆವಲಪರ್ ದಾಖಲೆಗಳು ಮತ್ತು Reddit ಟ್ರೇಡ್ಮಾರ್ಕ್ಗಳಲ್ಲಿ (“Reddit ಪರವಾನಗಿ ಪಡೆದ ಸಾಮಗ್ರಿಗಳು”) ಇತರರ ವಿಷಯವೂ ಇರಬಹುದು ಎಂಬುದನ್ನು ನೀವು ಒಪ್ಪಿಕೊಳ್ಳುತ್ತೀರಿ. ಅಂತಹ ಇತರರ ವಿಷಯವನ್ನು ಬಳಸುವಾಗ, ಅದರ ಮಾಲೀಕರು ವಿಧಿಸಿರುವ ಯಾವುದೇ ನಿಯಮಗಳು ಅಥವಾ ನಿರ್ಬಂಧಗಳನ್ನು ನೀವು ಪಾಲಿಸಬೇಕು. Reddit ಪರವಾನಗಿ ನೀಡಿರುವ ವಿಷಯಗಳನ್ನು ಮಾರಾಟ ಮಾಡುವುದಿಲ್ಲ; ಅವುಗಳನ್ನು ಬಳಸಲು ಪರವಾನಗಿ ನೀಡಲಾಗುತ್ತದೆ. ಡೆವಲಪರ್ ನಿಯಮಗಳಲ್ಲಿ ಬೇರೆ ರೀತಿಯಾಗಿ ಹೇಳಿರುವುದನ್ನು ಹೊರತುಪಡಿಸಿ, ಮೇಲಿನ ವಿಷಯಗಳಿಗೆ ಸಂಬಂಧಿಸಿದಂತೆ ಡೆವಲಪರ್ ನಿಯಮಗಳಡಿ ನಿಮಗೆ ನೀಡದಿರುವ ಎಲ್ಲಾ ಹಕ್ಕುಗಳು, ಮಾಲೀಕತ್ವ ಮತ್ತು ಹಿತಾಸಕ್ತಿಗಳನ್ನು ವಿಶ್ವದಾದ್ಯಂತ Reddit ತನ್ನಲ್ಲೇ ಉಳಿಸಿಕೊಂಡಿರುತ್ತದೆ.
5.2 ಬಳಕೆದಾರರ ವಿಷಯ
ಬಳಕೆದಾರರ ವಿಷಯದ ಮಾಲೀಕರು ಬಳಕೆದಾರರೇ, Reddit ಅಲ್ಲ. ಬಳಕೆದಾರರ ವಿಷಯದ ಮಾಲೀಕರು ಅದರ ಬಳಕೆಗೆ ವಿಧಿಸಿರುವ ಎಲ್ಲಾ ನಿಯಮಗಳು ಮತ್ತು ನಿರ್ಬಂಧಗಳನ್ನು ನೀವು ಪಾಲಿಸಬೇಕು. ಇದರಲ್ಲಿ “ಎಲ್ಲಾ ಹಕ್ಕುಗಳು ಕಾಯ್ದಿರಿಸಲಾಗಿದೆ” ಎಂಬ ಸೂಚನೆಗಳು, ಕ್ರಿಯೇಟಿವ್ ಕಾಮನ್ಸ್ ಪರವಾನಗಿಗಳು ಅಥವಾ ನಿಮ್ಮ ಮತ್ತು ಆ ವಿಷಯದ ಮಾಲೀಕರ ನಡುವೆ ಒಪ್ಪಿಕೊಂಡಿರುವ ಇತರ ನಿಯಮಗಳು ಮತ್ತು ಷರತ್ತುಗಳು ಇರಬಹುದು. Reddit ಪರವಾನಗಿಯನ್ನು ಹೊರತುಪಡಿಸಿ, ಬೇರೆ ಯಾವುದೇ ಹಕ್ಕುಗಳು ಅಥವಾ ಪರವಾನಗಿಗಳನ್ನು ನೀಡಲಾಗುವುದಿಲ್ಲ ಅಥವಾ ಅವು ಇರುವುದಾಗಿ ಪರಿಗಣಿಸಲಾಗುವುದಿಲ್ಲ. ಇದರಲ್ಲಿ ಸಂಬಂಧಿಸಿದ ಬಳಕೆದಾರರ ವಿಷಯದ ಹಕ್ಕುದಾರರ ಸ್ಪಷ್ಟ ಅನುಮತಿಯಿಲ್ಲದೆ, ಯಂತ್ರ ಕಲಿಕೆ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮಾದರಿಯನ್ನು ತರಬೇತಿ ನೀಡುವುದು ಸೇರಿದಂತೆ ಇತರ ಉದ್ದೇಶಗಳಿಗೆ ಬಳಕೆದಾರರ ವಿಷಯವನ್ನು ಬಳಸುವ ಹಕ್ಕೂ ಸೇರಿದೆ.
ನಿಮ್ಮ ಆಪ್ನಲ್ಲಿ ಬಳಕೆದಾರರ ವಿಷಯವನ್ನು ಬಳಸುವಾಗ, ನಮ್ಮ ಸೇವೆಯಲ್ಲಿರುವ ಆ ವಿಷಯಕ್ಕೆ ಲಿಂಕ್ ನೀಡಬೇಕು, ಸಂಬಂಧಿಸಿದ ಬಳಕೆದಾರರ ಬಳಕೆದಾರ ಹೆಸರನ್ನು ನಮೂದಿಸಬೇಕು ಮತ್ತು ಆ ವಿಷಯ ನಮ್ಮ ಸೇವೆಯಿಂದ ಪಡೆದದ್ದು ಎಂದು ಸ್ಪಷ್ಟವಾಗಿ ತಿಳಿಸಬೇಕು. ಇದನ್ನು ನಮ್ಮ ಬ್ರ್ಯಾಂಡ್ ಮಾರ್ಗಸೂಚಿಗಳು ಮತ್ತು ಮಾಧ್ಯಮ ಮಾರ್ಗಸೂಚಿಗಳ ಪ್ರಕಾರ ಮಾಡಬೇಕು.
5.3 Reddit ಟ್ರೇಡ್ಮಾರ್ಕ್ಗಳು
Reddit ಪರವಾನಗಿಯಡಿ ಹೆಸರನ್ನು ಉಲ್ಲೇಖಿಸುವ ಉದ್ದೇಶಕ್ಕಾಗಿ ಅನುಮತಿಸಿರುವ Reddit ಟ್ರೇಡ್ಮಾರ್ಕ್ಗಳ ಬಳಕೆಯನ್ನು ಹೊರತುಪಡಿಸಿ, Reddit ನ ಮುಂಚಿತ ಲಿಖಿತ ಅನುಮತಿಯಿಲ್ಲದೆ ನಿಮ್ಮ ಆಪ್ನ ಹೆಸರಿನಲ್ಲಿ ಅಥವಾ ನಿಮ್ಮ ಆಪ್ ಅನ್ನು ಪ್ರಚಾರ ಮಾಡಲು ಅಥವಾ ಗುರುತಿಸಲು Reddit ಟ್ರೇಡ್ಮಾರ್ಕ್ಗಳನ್ನು ಬಳಸುವಂತಿಲ್ಲ. (ಇದರಲ್ಲಿ ನಿಮ್ಮ ಆಪ್ಗೆ ಸಂಬಂಧಿಸಿದ ಯಾವುದೇ ವಸ್ತುಗಳಲ್ಲಿನ ಬಳಕೆಯೂ ಸೇರಿದೆ). ನೀವು ಈ ಕೆಳಗಿನವುಗಳನ್ನು ಮಾಡಬಾರದು ಎಂದು ಸಹ ಒಪ್ಪುತ್ತೀರಿ:
-
Reddit ಟ್ರೇಡ್ಮಾರ್ಕ್ಗಳನ್ನು ಬಳಸಬಾರದು ಅಥವಾ ಅವುಗಳನ್ನು ಬದಲಾಯಿಸಿ ಹೊಸ ರೂಪದಲ್ಲಿ ಬಳಸಬಾರದು. ಹಾಗೆ ಮಾಡುವುದರಿಂದ ನಿಮ್ಮ ಆಪ್ಗೆ Reddit ನ ಅನುಮೋದನೆ, ಸಂಬಂಧ ಅಥವಾ ಪ್ರಾಯೋಜಕತ್ವ ಇದೆ ಎಂಬ ಭಾವನೆ ಮೂಡಬಾರದು.
-
Reddit ಟ್ರೇಡ್ಮಾರ್ಕ್ಗಳನ್ನು ಬಳಕೆದಾರರನ್ನು ತಪ್ಪುದಾರಿಗೆಳೆಯುವ, ಮೋಸಗೊಳಿಸುವ ಅಥವಾ ಗೊಂದಲಕ್ಕೀಡು ಮಾಡುವ ರೀತಿಯಲ್ಲಿ ಬಳಸಬಾರದು. Reddit ಟ್ರೇಡ್ಮಾರ್ಕ್ಗಳಿಗೆ ತುಂಬಾ ಹೋಲುವ ಯಾವುದೇ ಗುರುತು ಅಥವಾ ಹೆಸರನ್ನು ಬಳಸುವುದು ಅಥವಾ ನೋಂದಾಯಿಸುವುದೂ ಇದರಲ್ಲಿ ಸೇರಿದೆ; ಅಥವಾ
-
Reddit ಟ್ರೇಡ್ಮಾರ್ಕ್ಗಳ ಮೇಲಿನ Reddit ನ ಮಾಲೀಕತ್ವವನ್ನು ಪ್ರಶ್ನಿಸಬಾರದು.
Reddit ಟ್ರೇಡ್ಮಾರ್ಕ್ಗಳ ಮೇಲಿನ Reddit ನ ಮಾಲೀಕತ್ವಕ್ಕೆ ವಿರುದ್ಧವಾದ ಯಾವುದೇ ಕ್ರಮವನ್ನು ನೀವು ಕೈಗೊಳ್ಳಬಾರದು. Reddit ಟ್ರೇಡ್ಮಾರ್ಕ್ಗಳ ಮೇಲಿನ Reddit ನ ವಿಶೇಷ ಹಕ್ಕುಗಳನ್ನು ಸ್ಥಾಪಿಸಲು ಅಥವಾ ಕಾಪಾಡಿಕೊಳ್ಳಲು Reddit ಅಗತ್ಯ ಅಥವಾ ಸೂಕ್ತವೆಂದು ಭಾವಿಸುವ ಯಾವುದೇ ಕ್ರಮದಲ್ಲಿ, (ಕಾನೂನು ಕ್ರಮವೂ ಸೇರಿದಂತೆ), ನೀವು Reddit ಜೊತೆ ಸಹಕರಿಸಬೇಕು ಎಂದು ಒಪ್ಪುತ್ತೀರಿ. Reddit ಟ್ರೇಡ್ಮಾರ್ಕ್ಗಳ ಯಾವುದೇ ಬಳಕೆಯಿಂದ ಉಂಟಾಗುವ ಎಲ್ಲ ಒಳ್ಳೆಯ ಹೆಸರು ಮತ್ತು ಪ್ರಯೋಜನಗಳು Reddit ಗೇ ಸೇರಿರುತ್ತವೆ.
5.4 ಹೆಸರು ಉಲ್ಲೇಖ ಮತ್ತು ಪ್ರಚಾರ
ಡೆವಲಪರ್ ನಿಯಮಗಳು ಮತ್ತು ಡೆವಲಪರ್ ದಾಖಲೆಗಳಲ್ಲಿ Reddit ತಿಳಿಸಿರುವಂತೆ ಅಗತ್ಯವಿರುವ ಎಲ್ಲಾ ಹೆಸರು ಉಲ್ಲೇಖಗಳನ್ನು ನೀವು ಪ್ರದರ್ಶಿಸಬೇಕು. Reddit ನ ಮುಂಚಿತ ಲಿಖಿತ ಅನುಮತಿಯಿಲ್ಲದೆ, ನೀವು Reddit ಪರವಾನಗಿ ನೀಡಿರುವ ವಿಷಯಗಳನ್ನು ಬಳಸುತ್ತಿರುವ ಬಗ್ಗೆ Reddit ಜೊತೆ ಪಾಲುದಾರಿಕೆ, Reddit ನ ಪ್ರಾಯೋಜಕತ್ವ ಅಥವಾ Reddit ನ ಅನುಮೋದನೆ ಇದೆ ಎಂಬ ಭಾವನೆ ಮೂಡಿಸುವ ಯಾವುದೇ ಹೇಳಿಕೆಯನ್ನು ಮಾಡಬಾರದು.
5.5 ಸಲಹೆಗಳು
Reddit ಪರವಾನಗಿ ನೀಡಿರುವ ವಿಷಯಗಳು ಅಥವಾ Reddit ಸೇವೆಗಳು ಮತ್ತು ಡೇಟಾಗೆ ಸಂಬಂಧಿಸಿದಂತೆ ನೀವು ಯಾವುದೇ ಸಲಹೆ, ಅಭಿಪ್ರಾಯ ಅಥವಾ ಇತರ ಪ್ರತಿಕ್ರಿಯೆ ನೀಡಿದರೆ, ಆ ಸಲಹೆ, ಅಭಿಪ್ರಾಯ ಮತ್ತು ಪ್ರತಿಕ್ರಿಯೆಯನ್ನು Reddit ತನ್ನ ಯಾವುದೇ ಬೌದ್ಧಿಕ ಆಸ್ತಿ ಅಥವಾ ಬೌದ್ಧಿಕ ಆಸ್ತಿ ಹಕ್ಕುಗಳಲ್ಲಿ ಮುಕ್ತವಾಗಿ ಬಳಸಲು, ಬಹಿರಂಗಪಡಿಸಲು, ನಕಲಿಸಲು, ಪರವಾನಗಿ ನೀಡಲು, ಹಂಚಲು ಮತ್ತು ಇತರ ರೀತಿಯಲ್ಲಿ ವಾಣಿಜ್ಯವಾಗಿ ಬಳಸಲು Reddit ಗೆ ನೀವು ಹಕ್ಕು ನೀಡುತ್ತೀರಿ.
6. ನೀವು ನೀಡುವ ಹೇಳಿಕೆಗಳು ಮತ್ತು ಭರವಸೆಗಳು
ನೀವು ಈ ಕೆಳಗಿನ ವಿಷಯಗಳನ್ನು ಹೇಳುತ್ತೀರಿ, ಖಚಿತಪಡಿಸುತ್ತೀರಿ, ಒಪ್ಪಿಕೊಳ್ಳುತ್ತೀರಿ ಮತ್ತು ಅಂಗೀಕರಿಸುತ್ತೀರಿ:
-
ಡೆವಲಪರ್ ನಿಯಮಗಳಲ್ಲಿರುವ Reddit ನ ಅರ್ಹತಾ ನಿಯಮಗಳ ಪ್ರಕಾರ, Reddit ಪರವಾನಗಿ ಪಡೆದ ವಸ್ತುಗಳನ್ನು ಪ್ರವೇಶಿಸಲು ಮತ್ತು ಬಳಸಲು ನೀವು ಅರ್ಹರಾಗಿದ್ದೀರಿ. ಅಲ್ಲದೆ, ಡೆವಲಪರ್ ನಿಯಮಗಳಿಗೆ ಒಪ್ಪಿಕೊಳ್ಳುವ ಮೊದಲು ಅದರ ಅರ್ಥ ಮತ್ತು ಪರಿಣಾಮಗಳನ್ನು ಓದಿ ಅರ್ಥಮಾಡಿಕೊಂಡಿದ್ದೀರಿ;
-
ಡೆವಲಪರ್ ನಿಯಮಗಳು ಮತ್ತು ನಮ್ಮ ಡೆವಲಪರ್ ದಾಖಲಾತಿಗೆ ಅನುಗುಣವಾಗಿ, Reddit ನಿಮಗೆ ಅಧಿಕೃತವಾಗಿ ನೀಡಿರುವ (ಅಥವಾ ಬಳಸಲು ಅನುಮತಿಸಿರುವ) ಪ್ರವೇಶ ಮಾಹಿತಿಯ ಮೂಲಕವೇ Reddit ಸೇವೆಗಳು ಮತ್ತು ಡೇಟಾವನ್ನು ಪ್ರವೇಶಿಸಬೇಕು ಅಥವಾ ಬಳಸಬೇಕು;
-
ನಿಮ್ಮ ಆ್ಯಪ್ ಅಥವಾ ನೀವು Reddit ಸೇವೆಗಳು ಮತ್ತು ಡೇಟಾವನ್ನು ಪ್ರವೇಶಿಸುವುದು ಅಥವಾ ಬಳಸುವುದು ಯಾವುದೇ ಮೂರನೇ ವ್ಯಕ್ತಿಯ ಹಕ್ಕುಗಳನ್ನು (ಬೌದ್ಧಿಕ ಸ್ವತ್ತು ಹಕ್ಕುಗಳು ಅಥವಾ ಇತರ ಮಾಲೀಕತ್ವದ ಹಕ್ಕುಗಳು ಸೇರಿದಂತೆ) ಉಲ್ಲಂಘಿಸುವಂತೆಯೂ, ದುರುಪಯೋಗಪಡಿಸಿಕೊಳ್ಳುವಂತೆಯೂ ಅಥವಾ ಬೇರೆ ಯಾವುದೇ ರೀತಿಯಲ್ಲಿ ಹಾನಿ ಮಾಡುವಂತೆಯೂ ಇರಬಾರದು;
-
ನಿಮ್ಮ ಆ್ಯಪ್ ಅಥವಾ ಆ್ಯಪ್ನ ವಿಷಯದಲ್ಲಿ ಬಳಸಿರುವ ಮೂರನೇ ವ್ಯಕ್ತಿಯ ಸಾಫ್ಟ್ವೇರ್, ಕೋಡ್, ವಸ್ತುಗಳು ಅಥವಾ ಇತರ ಬೌದ್ಧಿಕ ಸ್ವತ್ತಿಗೆ ಅಗತ್ಯವಿರುವ ಎಲ್ಲ ಹಕ್ಕುಗಳನ್ನು ನೀವು ಪಡೆದಿದ್ದೀರಿ ಮತ್ತು ಮುಂದೆಯೂ ಹೊಂದಿರಬೇಕು. (ನಿಮ್ಮ ಆ್ಯಪ್ ರಚಿಸುವಾಗ ದೊಡ್ಡ ಭಾಷಾ ಮಾದರಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಯಂತ್ರ ಕಲಿಕೆ, ಅಲ್ಗಾರಿದಮ್ ಅಥವಾ ಇತರ ಮಾದರಿ ಅಥವಾ ಸೇವೆಗಳನ್ನು ಬಳಸಿದ್ದರೂ ಇದು ಅನ್ವಯಿಸುತ್ತದೆ). Reddit ಗೆ ಡೆವಲಪರ್ ಪರವಾನಗಿ ಹಾಗೂ ಡೆವಲಪರ್ ನಿಯಮಗಳಲ್ಲಿ ನೀಡಿರುವ ಇತರ ಪರವಾನಗಿಗಳು, ಅನುಮತಿಗಳು ಮತ್ತು ಹಕ್ಕುಗಳನ್ನು ನೀಡಲು ಈ ಹಕ್ಕುಗಳು ಅಗತ್ಯವಾಗಿರಬೇಕು. ಈ ಹಕ್ಕುಗಳನ್ನು ಪಡೆಯುವಾಗ ಯಾವುದೇ ಕಾನೂನು ಉಲ್ಲಂಘನೆಯಾಗಿರಬಾರದು ಮತ್ತು ನಿಮ್ಮ ಆ್ಯಪ್ ಕಾರ್ಯನಿರ್ವಹಿಸುವಾಗ ಅಥವಾ ಆ್ಯಪ್ನ ವಿಷಯವನ್ನು ಬಳಸುವಾಗ ಉಲ್ಲಂಘನೆಯಾಗುವ ಯಾವುದೇ ಕಡ್ಡಾಯ ಉಲ್ಲೇಖ ನಿಯಮಗಳು ಅಥವಾ ಪ್ರವೇಶ ಷರತ್ತುಗಳು ಇರಬಾರದು; ಮತ್ತು
-
ಡೆವಲಪರ್ ನಿಯಮಗಳ ಅಡಿಯಲ್ಲಿ ಪರವಾನಗಿಗಳನ್ನು ನೀಡುವಾಗ, Reddit ಸೇವೆಗಳು ಮತ್ತು ಡೇಟಾವನ್ನು ಪ್ರವೇಶಿಸುವಾಗ ಅಥವಾ ಬಳಸುವಾಗ, ಅಥವಾ ಡೆವಲಪರ್ ನಿಯಮಗಳ ಅಡಿಯಲ್ಲಿ ನಿಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವಾಗ, ನೀವು ಯಾವುದೇ ಕಾನೂನು, ನಿಯಮ ಅಥವಾ ನಿಯಮಾವಳಿಯನ್ನು ಉಲ್ಲಂಘಿಸುತ್ತಿಲ್ಲ ಮತ್ತು ಮುಂದೆಯೂ ಉಲ್ಲಂಘಿಸುವುದಿಲ್ಲ.
ಕೆಲವು ಸಂದರ್ಭಗಳಲ್ಲಿ Reddit ನಿಮ್ಮಿಂದ ಹೆಚ್ಚುವರಿ ಮಾಹಿತಿ ಮತ್ತು ದಾಖಲೆಗಳನ್ನು ನೀಡುವಂತೆ ಕೇಳಬಹುದು. ಉದಾಹರಣೆಗೆ, ಸರ್ಕಾರಿ ಪ್ರಾಧಿಕಾರದಿಂದ ವಿನಂತಿ ಬಂದರೆ, ಅನ್ವಯವಾಗುವ ಕಾನೂನು ಅಥವಾ ನಿಯಮದ ಪ್ರಕಾರ ಅಗತ್ಯವಿದ್ದರೆ ಅಥವಾ ಡೆವಲಪರ್ ನಿಯಮಗಳ ಉಲ್ಲಂಘನೆಯಾಗಿರುವ ಸಾಧ್ಯತೆಯನ್ನು ಪರಿಶೀಲಿಸಲು. Reddit ತನ್ನ ವಿವೇಚನೆಯಂತೆ, ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸುವ, ನಿಮ್ಮ ಆ್ಯಪ್ ಅಥವಾ Devvit ಆ್ಯಪ್ ಅನ್ನು ಪಟ್ಟಿಯಿಂದ ತೆಗೆದುಹಾಕುವ ಮತ್ತು Reddit ಸೇವೆಗಳು ಹಾಗೂ ಡೇಟಾವನ್ನು ಪ್ರವೇಶಿಸುವ ನಿಮ್ಮ ಸಾಮರ್ಥ್ಯವನ್ನು ಬ್ಲಾಕ್ ಮಾಡುವ ಹಕ್ಕನ್ನು ಹೊಂದಿದೆ. ನೀವು ನೀಡಬೇಕಾದ ಮಾಹಿತಿ ಮತ್ತು ದಾಖಲೆಗಳನ್ನು Reddit ಪರಿಶೀಲಿಸಿ ಪ್ರಕ್ರಿಯೆ ಪೂರ್ಣಗೊಳಿಸುವವರೆಗೆ ಈ ಕ್ರಮಗಳು ಜಾರಿಯಲ್ಲಿರಬಹುದು. ನಮ್ಮ ವಿನಂತಿಗೆ ನೀವು ಸಂಪೂರ್ಣ ಮತ್ತು ಸರಿಯಾದ ಮಾಹಿತಿಯನ್ನು ನೀಡದಿದ್ದರೆ, Reddit ನಿಮ್ಮ ಆ್ಯಪ್ ಅಥವಾ Devvit ಆ್ಯಪ್ ಅನ್ನು ಮತ್ತೆ ಪಟ್ಟಿಗೆ ಸೇರಿಸಲು ಅಥವಾ Reddit ಸೇವೆಗಳು ಮತ್ತು ಡೇಟಾಗೆ ನಿಮ್ಮ ಪ್ರವೇಶವನ್ನು ಮರುಸ್ಥಾಪಿಸಲು ನಿರಾಕರಿಸಬಹುದು.
7. ಗೌಪ್ಯತೆ ಮತ್ತು ಭದ್ರತೆ
7.1 ಗೌಪ್ಯತೆ ನಿಯಮಗಳ ಪಾಲನೆ
ನೀವು ಡೆವಲಪರ್ ಡೇಟಾ ಸಂರಕ್ಷಣಾ ಸೇರ್ಪಡೆ ಒಪ್ಪಂದ (“DPA”) ಮತ್ತು ಅದರಲ್ಲಿ ವ್ಯಾಖ್ಯಾನಿಸಿರುವ ಎಲ್ಲಾ ಅನ್ವಯಿಸುವ ಡೇಟಾ ಸಂರಕ್ಷಣಾ ಕಾನೂನುಗಳನ್ನು ಪಾಲಿಸಬೇಕು. DPA ಅನ್ನು ಇಲ್ಲಿ ನೋಡಬಹುದು ಮತ್ತು Reddit ಅದನ್ನು ಕಾಲಕಾಲಕ್ಕೆ ನವೀಕರಿಸಬಹುದು. ಅನ್ವಯಿಸುವ ಡೇಟಾ ಸಂರಕ್ಷಣಾ ಕಾನೂನುಗಳನ್ನು ಪಾಲಿಸಲು ನೀವು Reddit ಜೊತೆ ಸಹಕರಿಸಲು ಒಪ್ಪುತ್ತೀರಿ.
7.2 ಗೌಪ್ಯತಾ ನೀತಿ
ನಿಮ್ಮ ಆಪ್ನ ಬಳಕೆದಾರರು ತಮ್ಮ ಮಾಹಿತಿಯನ್ನು ನೀವು ಹೇಗೆ ಬಳಸುತ್ತೀರಿ ಎಂಬುದನ್ನು ಅರ್ಥಮಾಡಿಕೊಂಡಿರಬೇಕು (ಮತ್ತು ಅನ್ವಯಿಸಿದರೆ), ಅದಕ್ಕೆ ಒಪ್ಪಿಗೆ ನೀಡಿರಬೇಕು. ಇದರಲ್ಲಿ ಅವರ ಮಾಹಿತಿಯನ್ನು ನೀವು ಹೇಗೆ ಪ್ರವೇಶಿಸುತ್ತೀರಿ, ಸಂಗ್ರಹಿಸುತ್ತೀರಿ, ಸಂಗ್ರಹಿಸಿಡುತ್ತೀರಿ, ಉಳಿಸಿಕೊಳ್ಳುತ್ತೀರಿ, ವರ್ಗಾಯಿಸುತ್ತೀರಿ, ಹಂಚಿಕೊಳ್ಳುತ್ತೀರಿ ಮತ್ತು ಬೇರೆ ರೀತಿಯಲ್ಲಿ ಸಂಸ್ಕರಿಸುತ್ತೀರಿ ಎಂಬುದೂ ಸೇರಿದೆ. ಯಾವುದೇ ಆಪ್ ಬಳಕೆದಾರರು ನಿಮ್ಮ ಆಪ್ ಅನ್ನು ಡೌನ್ಲೋಡ್ ಮಾಡುವ, ಇನ್ಸ್ಟಾಲ್ ಮಾಡುವ ಅಥವಾ ಬೇರೆ ರೀತಿಯಲ್ಲಿ ಸೈನ್ ಅಪ್ ಮಾಡುವ ಮೊದಲು, ಅಥವಾ ನಿಮ್ಮ ಆಪ್ ಬಳಕೆದಾರರ ಮಾಹಿತಿಯನ್ನು ಬಳಸುವ ಮೊದಲು, ಅನ್ವಯಿಸುವ ಎಲ್ಲಾ ಗೌಪ್ಯತೆ ಮತ್ತು ಡೇಟಾ ಸಂರಕ್ಷಣಾ ಕಾನೂನುಗಳು ಹಾಗೂ ಸಂಬಂಧಿಸಿದ ಆಪ್ ಸ್ಟೋರ್ ನಿಯಮಗಳನ್ನು ಪಾಲಿಸುವ ನಿಮ್ಮ ಆಪ್ನ ಗೌಪ್ಯತಾ ನೀತಿಯನ್ನು ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಬೇಕು ಮತ್ತು ಅದನ್ನು ಪಾಲಿಸಬೇಕು. ಆ ಗೌಪ್ಯತಾ ನೀತಿಯಲ್ಲಿ ನೀವು ಯಾವ ಮಾಹಿತಿಯನ್ನು ಸಂಗ್ರಹಿಸುತ್ತೀರಿ, ಅದನ್ನು ಹೇಗೆ ಬಳಸುತ್ತೀರಿ, ಸಂಗ್ರಹಿಸಿಡುತ್ತೀರಿ ಮತ್ತು ಹಂಚಿಕೊಳ್ಳುತ್ತೀರಿ, ಹಾಗೆಯೇ ಬಳಕೆದಾರರು ತಮ್ಮ ಸಂಗ್ರಹಿಸಿದ ಮಾಹಿತಿಯನ್ನು ಅಳಿಸುವಂತೆ ಹೇಗೆ ವಿನಂತಿಸಬಹುದು ಎಂಬುದನ್ನು ಸಂಪೂರ್ಣವಾಗಿ, ನಿಖರವಾಗಿ ಮತ್ತು ಸ್ಪಷ್ಟವಾಗಿ ವಿವರಿಸಬೇಕು.
ನಿಮ್ಮ ಗೌಪ್ಯತಾ ನೀತಿ, ಅನ್ವಯಿಸುವ ಕಾನೂನುಗಳು ಮತ್ತು ನಿಯಮಗಳು ಹಾಗೂ ಡೆವಲಪರ್ ನಿಯಮಗಳಿಗೆ ಅನುಗುಣವಾಗಿ ಮಾತ್ರ Reddit ಸೇವೆಗಳು ಮತ್ತು ಡೇಟಾವನ್ನು ಬಳಸಬಹುದು. ನಿಮ್ಮ ಗೌಪ್ಯತಾ ನೀತಿಯು ಡೆವಲಪರ್ ನಿಯಮಗಳು, ನಮ್ಮ ಬಳಕೆದಾರರ ಒಪ್ಪಂದ ಅಥವಾ ನಮ್ಮ ಗೌಪ್ಯತಾ ನೀತಿಗೆ ವಿರುದ್ಧವಾಗಿರಬಾರದು, ಅವುಗಳನ್ನು ಬದಲಾಯಿಸಬಾರದು ಅಥವಾ ಅವುಗಳಿಗಿಂತ ಮೇಲುಗೈ ಹೊಂದಿರಬಾರದು ಎಂದು ನೀವು ಒಪ್ಪುತ್ತೀರಿ. ನಿಮ್ಮ ಆಪ್ನ ಗೌಪ್ಯತಾ ನೀತಿಯೊಂದಿಗೆ ಯಾವುದೇ ಸಂಘರ್ಷ ಅಥವಾ ಅಸಂಗತತೆ ಉಂಟಾದರೆ, ಡೆವಲಪರ್ ನಿಯಮಗಳು, ನಮ್ಮ ಬಳಕೆದಾರರ ಒಪ್ಪಂದ ಮತ್ತು ನಮ್ಮ ಗೌಪ್ಯತಾ ನೀತಿಯೇ ಅನ್ವಯಿಸುತ್ತವೆ. ಅನ್ವಯಿಸಿದಲ್ಲಿ, ನಿಮ್ಮ ಆಪ್ನ ಗೌಪ್ಯತಾ ನೀತಿಗೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಲಭ್ಯವಿರುವ ಮತ್ತು ನವೀಕರಿಸಿದ ಲಿಂಕ್ಗಳನ್ನು ಡೆವಲಪರ್ ಪ್ಲಾಟ್ಫಾರ್ಮ್ನಲ್ಲಿ ಸದಾ ಇರಿಸಬೇಕು. ಇದರ ಜೊತೆಗೆ, Reddit ಸೇವೆಗಳು ಮತ್ತು ಡೇಟಾವನ್ನು ಬಳಸುವ ಮೂಲಕ, ಸಲ್ಲಿಸಲಾದ ಮಾಹಿತಿಯನ್ನು ನಮ್ಮ ಗೌಪ್ಯತಾ ನೀತಿಯ ಪ್ರಕಾರ Reddit ಬಳಸಬಹುದು. ಅನ್ವಯಿಸುವ ಕಾನೂನು ಅಥವಾ ನಿಯಮಗಳ ಪ್ರಕಾರ ಅಗತ್ಯವಿರುವ ಸಂದರ್ಭವನ್ನು ಹೊರತುಪಡಿಸಿ, ಡೆವಲಪರ್ ನಿಯಮಗಳನ್ನು ಪಾಲಿಸುವ ಷರತ್ತಿನ ಮೇಲೆ ಮಾತ್ರ Reddit ಸೇವೆಗಳು ಮತ್ತು ಡೇಟಾವನ್ನು ಯಾವುದೇ ಮೂರನೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬಹುದು.
7.3 ಡೇಟಾ ಹಂಚಿಕೆ ಮತ್ತು ಸಂಗ್ರಹಣೆ
ಅನ್ವಯಿಸುವ ಕಾನೂನು ಅಥವಾ ನಿಯಮಗಳ ಪ್ರಕಾರ Reddit ಸೇವೆಗಳು ಮತ್ತು ಡೇಟಾವನ್ನು ಉಳಿಸಿಕೊಳ್ಳುವುದು ನಿಮಗೆ ಕಡ್ಡಾಯವಾಗಿರುವ ಸಂದರ್ಭವನ್ನು ಹೊರತುಪಡಿಸಿ, Reddit ಕೇಳಿದಾಗ ನಿಮ್ಮ ಬಳಿ ಇರುವ ಅಥವಾ ನಿಮ್ಮ ನಿಯಂತ್ರಣದಲ್ಲಿರುವ Reddit ಸೇವೆಗಳು ಮತ್ತು ಡೇಟಾವನ್ನು ತಕ್ಷಣವೇ ನವೀಕರಿಸಬೇಕು ಮತ್ತು ಕೆಳಗಿನ ಸಂದರ್ಭಗಳಲ್ಲಿ ನಿಮ್ಮ ಬಳಿ ಇರುವ ಅಥವಾ ನಿಮ್ಮ ನಿಯಂತ್ರಣದಲ್ಲಿರುವ ಯಾವುದೇ Reddit ಸೇವೆಗಳು ಮತ್ತು ಡೇಟಾವನ್ನು ಅಳಿಸಬೇಕು:
-
ಡೆವಲಪರ್ ನಿಯಮಗಳ ಅಡಿಯಲ್ಲಿ ಅನುಮತಿಸಿರುವ, ನಿಮ್ಮ ಆಪ್ಗೆ ತಿಳಿಸಿ ಅನುಮೋದಿಸಲಾದ ಕಾರ್ಯನಿರ್ವಹಣೆಗೆ ಅದನ್ನು ಇನ್ನು ಮುಂದೆ ಉಳಿಸಿಕೊಳ್ಳುವ ಅಗತ್ಯವಿಲ್ಲದಿದ್ದಾಗ;
-
ನೀವು ನಿಮ್ಮ ಆಪ್ನ ಕಾರ್ಯಾಚರಣೆಯನ್ನು ನಿಲ್ಲಿಸಿದಾಗ (ನೀವೇ ನಿಲ್ಲಿಸಿದರೂ, Reddit ಕೈಗೊಂಡ ಜಾರಿ ಕ್ರಮದ ಕಾರಣದಿಂದ ನಿಲ್ಲಿಸಿದರೂ ಅಥವಾ ಬೇರೆ ಯಾವುದೇ ಕಾರಣದಿಂದ ನಿಲ್ಲಿಸಿದರೂ);
-
Reddit ಅದನ್ನು ಅಳಿಸುವಂತೆ ಕೇಳಿದಾಗ;
-
ಸಂಬಂಧಿಸಿದ ಆಪ್ ಬಳಕೆದಾರರು ಅದನ್ನು ಅಳಿಸುವಂತೆ ಕೇಳಿದಾಗ; ಅಥವಾ
-
ಅನ್ವಯಿಸುವ ಕಾನೂನುಗಳು ಅಥವಾ ನಿಯಮಗಳ ಪ್ರಕಾರ ಅಗತ್ಯವಿರುವಾಗ.
ಆಪ್ ಬಳಕೆದಾರರು ತಮ್ಮ ಆಪ್ನ ವಿಷಯವನ್ನು ಬದಲಾಯಿಸಲು ಅಥವಾ ಅಳಿಸಲು ಸುಲಭವಾಗಿ ವಿನಂತಿಸಿಕೊಳ್ಳಬಹುದಾದ ವ್ಯವಸ್ಥೆಯನ್ನು ನೀವು ಒದಗಿಸಬೇಕು. ನಿಮಗೆ ಯಾವುದೇ Reddit ಪರವಾನಗಿ ನೀಡಿರುವ ವಿಷಯ ತಪ್ಪಾಗಿ ಬಂದರೆ, ತಕ್ಷಣವೇ Reddit ಗೆ ತಿಳಿಸಿ, ಅದನ್ನು ಅಳಿಸಬೇಕು ಮತ್ತು Reddit ಕೇಳಿದರೆ ಅಳಿಸಿರುವುದಕ್ಕೆ ಪುರಾವೆ ನೀಡಬೇಕು.
7.4 ಸುರಕ್ಷತೆ
Reddit ನೀಡಿರುವ ವಸ್ತುಗಳ ಸುರಕ್ಷತೆಯನ್ನು ನೀವು ಕಾಪಾಡಬೇಕು. ಡೆವಲಪರ್ ನಿಯಮಗಳಲ್ಲಿ ಸ್ಪಷ್ಟವಾಗಿ ಅನುಮತಿಸಿರುವ ಸಂದರ್ಭಗಳನ್ನು ಹೊರತುಪಡಿಸಿ, Reddit ಸೇವೆಗಳು ಮತ್ತು ಡೇಟಾಗೆ ಸಂಬಂಧಿಸಿದ ಯಾವುದೇ ಪ್ರವೇಶ ಮಾಹಿತಿಯನ್ನು ಅಥವಾ ಇತರ Reddit ಪರವಾನಗಿ ಪಡೆದ ವಸ್ತುಗಳನ್ನು ಮೂರನೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬಾರದು ಅಥವಾ ಅವರಿಗೆ ಲಭ್ಯವಾಗುವಂತೆ ಮಾಡಬಾರದು. Reddit ಸೇವೆಗಳು ಮತ್ತು ಡೇಟಾವನ್ನು ಅನುಮತಿಯಿಲ್ಲದ ಪ್ರವೇಶ ಅಥವಾ ಬಳಕೆಯಿಂದ (ನಾಶ, ನಷ್ಟ, ಬದಲಾವಣೆ, ಬಹಿರಂಗಪಡಿಸುವಿಕೆ, ಹಂಚಿಕೆ ಅಥವಾ ಇತರ ರೀತಿಯ ದುರ್ಬಳಕೆ ಸೇರಿದಂತೆ) ರಕ್ಷಿಸಲು, ಡೇಟಾವನ್ನು ಸಂಗ್ರಹಿಸಿಟ್ಟಿರುವಾಗ ಎನ್ಕ್ರಿಪ್ಟ್ ಮಾಡುವುದೂ ಸೇರಿದಂತೆ, ವಾಣಿಜ್ಯವಾಗಿ ಸಮಂಜಸವಾದ ಎಲ್ಲಾ ಪ್ರಯತ್ನಗಳನ್ನು ನೀವು ಮಾಡಬೇಕು. ಅನುಮತಿಯಿಲ್ಲದ ಪ್ರವೇಶ ಮತ್ತು ಬಳಕೆಯನ್ನು ತಡೆಯಲು ಆಡಳಿತಾತ್ಮಕ, ಭೌತಿಕ ಮತ್ತು ತಾಂತ್ರಿಕ ಸುರಕ್ಷತಾ ಕ್ರಮಗಳನ್ನು ನೀವು ಜಾರಿಯಲ್ಲಿಡಬೇಕು. ಡೇಟಾ ಸುರಕ್ಷತೆ ಮತ್ತು ಗೌಪ್ಯತೆಗೆ ಸಂಬಂಧಿಸಿದ ಅನ್ವಯವಾಗುವ ಕಾನೂನುಗಳು ಮತ್ತು ನಿಯಮಗಳನ್ನು ಪಾಲಿಸಬೇಕು. (ಉದಾಹರಣೆಗೆ, ಡೇಟಾವನ್ನು ಅಳಿಸುವ ಮತ್ತು ಡೇಟಾವನ್ನು ಸಂಗ್ರಹಿಸಿಡುವ ಅವಧಿಯನ್ನು ಮಿತಿಗೊಳಿಸುವ ಕ್ರಮಗಳನ್ನು ಜಾರಿಗೊಳಿಸಬೇಕು). ವೈರಸ್, ವರ್ಮ್ ಅಥವಾ ಇತರ ಯಾವುದೇ ಹಾನಿಕಾರಕ ಕೋಡ್ ಅಥವಾ ವಸ್ತುಗಳ ಮೂಲಕವೂ ಅನುಮತಿಯಿಲ್ಲದೆ Reddit ಸೇವೆಗಳು ಮತ್ತು ಡೇಟಾದ ಯಾವುದೇ ಫೀಚರ್ ಅಥವಾ ಕಾರ್ಯಗಳನ್ನು ಪ್ರವೇಶಿಸುವುದು ಅಥವಾ ಬಳಸುವುದನ್ನು ತಡೆಯಲು, ಉದ್ಯಮದಲ್ಲಿ ಸಾಮಾನ್ಯವಾಗಿ ಬಳಸುವ ಸುರಕ್ಷತಾ ಕ್ರಮಗಳನ್ನು ನೀವು ಬಳಸಬೇಕು. ಡೆವಲಪರ್ ನಿಯಮಗಳಲ್ಲಿ ಸ್ಪಷ್ಟವಾಗಿ ಅನುಮತಿಸಿರುವ ಸಂದರ್ಭಗಳನ್ನು ಹೊರತುಪಡಿಸಿ, Reddit ಸೇವೆಗಳು ಮತ್ತು ಡೇಟಾ ಹಾಗೂ ಇತರ Reddit ಪರವಾನಗಿ ಪಡೆದ ವಸ್ತುಗಳನ್ನು ಗೌಪ್ಯವಾಗಿ ಮತ್ತು ಸುರಕ್ಷಿತವಾಗಿ ಕಾಪಾಡಬೇಕು. ಇದಕ್ಕಾಗಿ ಡೇಟಾಗೆ ಉದ್ಯಮದಲ್ಲಿ ಸಾಮಾನ್ಯವಾಗಿ ಬಳಸುವ ಸಂಸ್ಥಾತ್ಮಕ ಮತ್ತು ತಾಂತ್ರಿಕ ಸುರಕ್ಷತಾ ಕ್ರಮಗಳನ್ನು ಬಳಸಬೇಕು. ನೀವು ಸಂಗ್ರಹಿಸಿಟ್ಟಿರುವ ಅದೇ ರೀತಿಯ ಡೇಟಾವನ್ನು ಸುರಕ್ಷಿತವಾಗಿಡಲು ಬಳಸುವ ಮಟ್ಟಕ್ಕಿಂತ ಕಡಿಮೆ ಕಾಳಜಿಯನ್ನು ಇಲ್ಲಿ ವಹಿಸಬಾರದು.
Reddit ಸೇವೆಗಳು ಮತ್ತು ಡೇಟಾವನ್ನು ಸಂಸ್ಕರಿಸುವ ಅಥವಾ ಅವುಗಳಿಗೆ ಸಂಬಂಧಿಸಿದ ನಿಮ್ಮ ವ್ಯವಸ್ಥೆಗಳ (ಅಥವಾ ನಿಮ್ಮ ಪರವಾಗಿ ಕೆಲಸ ಮಾಡುವವರ ವ್ಯವಸ್ಥೆಗಳ) ಸುರಕ್ಷತೆ, ಗೌಪ್ಯತೆ ಅಥವಾ ಸಮಗ್ರತೆಗೆ ಧಕ್ಕೆ ಉಂಟುಮಾಡಬಹುದಾದ ಅನುಮತಿಯಿಲ್ಲದ ಪ್ರವೇಶ, ಸುರಕ್ಷತಾ ಉಲ್ಲಂಘನೆ, ಸಂಭವನೀಯ ದೌರ್ಬಲ್ಯ ಅಥವಾ ಇತರ ಘಟನೆಗಳ ಬಗ್ಗೆ ನಿಮಗೆ ತಿಳಿದಿದ್ದರೆ ಅಥವಾ ಅನುಮಾನವಿದ್ದರೆ, ತಕ್ಷಣವೇ Reddit ಗೆ ತಿಳಿಸಬೇಕು ಮತ್ತು Reddit ಸಮಂಜಸವಾಗಿ ಕೇಳುವ ಯಾವುದೇ ಮಾಹಿತಿಯನ್ನು ನೀಡಬೇಕು. ಮೇಲೆ ಹೇಳಿದಂತಹ ಯಾವುದೇ ಘಟನೆ ನಡೆದರೆ, ನೀವು Reddit ಜೊತೆ ಚರ್ಚಿಸಿ ಸಹಕರಿಸಬೇಕು, ಅಗತ್ಯವಿರುವ ಯಾವುದೇ ಸೂಚನೆಗಳನ್ನು ನೀಡಲು ಸಹಾಯ ಮಾಡಬೇಕು, ಘಟನೆಯ ಬಗ್ಗೆ Reddit ಗೆ ನಿಯಮಿತವಾಗಿ ಮಾಹಿತಿ ನೀಡಬೇಕು ಮತ್ತು Reddit ಸೇವೆಗಳು ಮತ್ತು ಡೇಟಾವನ್ನು ನೀವು ಪ್ರವೇಶಿಸಿದ ಪರಿಣಾಮ ಉಂಟಾದ ಯಾವುದೇ ಸುರಕ್ಷತಾ ಉಲ್ಲಂಘನೆ ಅಥವಾ ಸಂಭವನೀಯ ದೌರ್ಬಲ್ಯವನ್ನು ತಕ್ಷಣ ಸರಿಪಡಿಸಬೇಕು.
8. ಮುಕ್ತಾಯ
8.1 ಒಪ್ಪಂದ ಮುಕ್ತಾಯಗೊಳಿಸುವ ಹಕ್ಕುಗಳು
Reddit ನಿಮಗೆ ಸೂಚನೆ ನೀಡುವ ಮೂಲಕ, ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣವಿದ್ದರೂ ಅಥವಾ ಯಾವುದೇ ಕಾರಣವಿಲ್ಲದಿದ್ದರೂ, ಡೆವಲಪರ್ ನಿಯಮಗಳು, ಅವುಗಳಡಿ ನಿಮಗೆ ನೀಡಿರುವ ಯಾವುದೇ ಹಕ್ಕುಗಳು ಅಥವಾ Reddit ಪರವಾನಗಿಯನ್ನು ತಕ್ಷಣವೇ ರದ್ದುಪಡಿಸಬಹುದು ಅಥವಾ ಅಮಾನತುಗೊಳಿಸಬಹುದು.
ನೀವು ನಮಗೆ ಸೂಚನೆ ನೀಡಿ, Reddit ಪರವಾನಗಿ ನೀಡಿರುವ ಎಲ್ಲಾ ವಿಷಯಗಳ ಬಳಕೆ ಮತ್ತು ಅವುಗಳಿಗೆ ನಿಮ್ಮ ಪ್ರವೇಶವನ್ನು ನಿಲ್ಲಿಸುವ ಮೂಲಕ, ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣಕ್ಕಾಗಿ ಡೆವಲಪರ್ ನಿಯಮಗಳನ್ನು ರದ್ದುಪಡಿಸಬಹುದು.
8.2 ಮುಕ್ತಾಯದ ಪರಿಣಾಮ
ಡೆವಲಪರ್ ನಿಯಮಗಳು ಮುಕ್ತಾಯಗೊಂಡ ನಂತರ: (a) ಡೆವಲಪರ್ ನಿಯಮಗಳಡಿ ನಿಮಗೆ ನೀಡಿರುವ ಎಲ್ಲಾ ಪರವಾನಗಿಗಳು, (Reddit ಪರವಾನಗಿಯೂ ಸೇರಿದಂತೆ), ತಕ್ಷಣವೇ ಮುಕ್ತಾಯಗೊಳ್ಳುತ್ತವೆ ಮತ್ತು ನೀವು Reddit ಪರವಾನಗಿ ನೀಡಿರುವ ಎಲ್ಲಾ ವಿಷಯಗಳ ಬಳಕೆಯನ್ನು ನಿಲ್ಲಿಸಬೇಕು; ಮತ್ತು (b) ನಿಮ್ಮ ವಶದಲ್ಲಿರುವ ಅಥವಾ ನಿಮ್ಮ ಬಳಿ ಇರುವ Reddit ಪರವಾನಗಿ ನೀಡಿರುವ ಎಲ್ಲ ವಿಷಯಗಳನ್ನು ಶಾಶ್ವತವಾಗಿ ಅಳಿಸಬೇಕು.
ನಿಮ್ಮ ಆಪ್ Devvit ಆಪ್ ಆಗಿದ್ದರೆ, ಆಪ್ನ ವಿಷಯಕ್ಕೆ ಸಂಬಂಧಿಸಿದಂತೆ Reddit ಗೆ ನೀಡಿರುವ ಡೆವಲಪರ್ ಪರವಾನಗಿ, ನಿಯಮಗಳು ಮುಕ್ತಾಯಗೊಂಡ ನಂತರವೂ ಮುಂದುವರಿಯುತ್ತದೆ. ಅಲ್ಲದೆ, ಮಾಡರೇಟರ್ಗಳಾಗಿರುವ ಬಳಕೆದಾರರು ಸೂಕ್ತವಾದ ಬದಲಾವಣೆ ಅವಧಿಯವರೆಗೆ ನಿಮ್ಮ Devvit ಆಪ್ ಅನ್ನು ಬಳಸಲು ಮತ್ತು ಅದಕ್ಕೆ ಪ್ರವೇಶ ಪಡೆಯಲು ಮುಂದುವರಿಯಬಹುದು.
ಡೆವಲಪರ್ ನಿಯಮಗಳು ಮುಕ್ತಾಯಗೊಂಡ ನಂತರವೂ, ವಿಭಾಗ 2.2 (ಪರಿಶೀಲನೆ ಹಕ್ಕು), 3.5 (ವಿಷಯ ತೆಗೆದುಹಾಕುವುದು), 5 (ಬೌದ್ಧಿಕ ಆಸ್ತಿ), 7.1 (ಗೌಪ್ಯತೆ ನಿಯಮಗಳ ಪಾಲನೆ), 7.3 (ಡೇಟಾ ಹಂಚಿಕೆ ಮತ್ತು ಸಂಗ್ರಹಣೆ), 8.2 (ಮುಕ್ತಾಯದ ಪರಿಣಾಮ), 9 (ಹಕ್ಕು ನಿರಾಕರಣೆ; ಹೊಣೆಗಾರಿಕೆಯ ಮಿತಿ; ನಷ್ಟಪರಿಹಾರ) ಮತ್ತು 10 (ಇತರ ನಿಯಮಗಳು) ಜಾರಿಯಲ್ಲಿರುತ್ತವೆ.
9. ಹಕ್ಕು ನಿರಾಕರಣೆ; ಹೊಣೆಗಾರಿಕೆಯ ಮಿತಿ; ನಷ್ಟಪರಿಹಾರ
9.1 ಹೊಣೆಗಾರಿಕೆ ನಿರಾಕರಣೆ
Reddit ಪರವಾನಗಿ ನೀಡಿರುವ ವಿಷಯಗಳಲ್ಲಿ ತಪ್ಪು ಮಾಹಿತಿ, ದೋಷಗಳು, ತಾಂತ್ರಿಕ ದೋಷಗಳು ಅಥವಾ ಸೇವೆಯಲ್ಲಿ ಅಡಚಣೆಗಳಿಲ್ಲ ಎಂದು Reddit ಯಾವುದೇ ಭರವಸೆ ನೀಡುವುದಿಲ್ಲ. ಹಾಗೆಯೇ, ಅವು ವಿಶ್ವಾಸಾರ್ಹ, ನಿಖರ, ಸಂಪೂರ್ಣ ಅಥವಾ ಬೇರೆ ರೀತಿಯಲ್ಲಿ ಮಾನ್ಯವಾಗಿವೆ ಎಂದೂ Reddit ಖಚಿತಪಡಿಸುವುದಿಲ್ಲ. Reddit ಪರವಾನಗಿ ನೀಡಿರುವ ವಿಷಯಗಳನ್ನು ಯಾವುದೇ ರೀತಿಯ ಖಾತರಿಯಿಲ್ಲದೆ “ಇರುವಂತೆಯೇ” ಒದಗಿಸಲಾಗುತ್ತದೆ. ಇದರಲ್ಲಿ ಮಾರಾಟಕ್ಕೆ ಯೋಗ್ಯತೆ, ನಿರ್ದಿಷ್ಟ ಉದ್ದೇಶಕ್ಕೆ ಸೂಕ್ತತೆ, ಲಭ್ಯತೆ, ಭದ್ರತೆ, ಮಾಲೀಕತ್ವ ಅಥವಾ ಹಕ್ಕು ಉಲ್ಲಂಘನೆಯಿಲ್ಲದಿರುವಿಕೆ ಕುರಿತ ಯಾವುದೇ ಅಂತರ್ನಿಹಿತ ಖಾತರಿಯೂ ಸೇರಿದೆ. ಇಂತಹ ಎಲ್ಲಾ ಖಾತರಿಗಳು ಮತ್ತು ಷರತ್ತುಗಳನ್ನು Reddit ಸ್ಪಷ್ಟವಾಗಿ ನಿರಾಕರಿಸುತ್ತದೆ. Reddit ಪರವಾನಗಿ ನೀಡಿರುವ ವಿಷಯಗಳನ್ನು ನಿಮ್ಮ ಸ್ವಂತ ನಿರ್ಧಾರ ಮತ್ತು ಅಪಾಯದಲ್ಲಿ ಬಳಸುತ್ತೀರಿ. Reddit ಪರವಾನಗಿ ನೀಡಿರುವ ಯಾವುದೇ ವಿಷಯವನ್ನು ಬಳಸುವುದರಿಂದ ಉಂಟಾಗುವ ಯಾವುದೇ ಹಾನಿಗೆ, ನಿಮ್ಮ ಕಂಪ್ಯೂಟರ್ ವ್ಯವಸ್ಥೆಗೆ ಆಗುವ ಹಾನಿ ಅಥವಾ ಡೇಟಾ ಕಳೆದುಕೊಳ್ಳುವುದೂ ಸೇರಿದಂತೆ, ನೀವು ಮಾತ್ರ ಸಂಪೂರ್ಣ ಜವಾಬ್ದಾರರಾಗಿರುತ್ತೀರಿ.
9.2 ಹೊಣೆಗಾರಿಕೆಯ ಮಿತಿ
Reddit ಪರವಾನಗಿ ನೀಡಿರುವ ವಿಷಯಗಳನ್ನು ಪ್ರವೇಶಿಸಿ ಬಳಸುವ ಮೂಲಕ, ಅನ್ವಯಿಸುವ ಕಾನೂನುಗಳ ಅಡಿಯಲ್ಲಿ ಅನುಮತಿಸಲಾಗುವ ಗರಿಷ್ಠ ಮಟ್ಟದವರೆಗೆ Reddit ಸಂಸ್ಥೆಗಳ ಹೊಣೆಗಾರಿಕೆಯನ್ನು ಮಿತಿಗೊಳಿಸಲು ನೀವು ಒಪ್ಪುತ್ತೀರಿ.
ಡೆವಲಪರ್ ನಿಯಮಗಳಿಂದ ಅಥವಾ ಅವುಗಳಿಗೆ ಸಂಬಂಧಿಸಿದಂತೆ ಉಂಟಾಗುವ ಯಾವುದೇ ಆಕಸ್ಮಿಕ, ಪರೋಕ್ಷ, ವಿಶೇಷ, ದಂಡಾತ್ಮಕ, ಪರಿಣಾಮಕಾರಿ ಅಥವಾ ಅದೇ ರೀತಿಯ ಹಾನಿ ಅಥವಾ ಹೊಣೆಗಾರಿಕೆಗೆ Reddit ಸಂಸ್ಥೆಗಳು ಜವಾಬ್ದಾರರಾಗಿರುವುದಿಲ್ಲ. ಈ ಹಾನಿ ಅಥವಾ ಹೊಣೆಗಾರಿಕೆ ಒಪ್ಪಂದ, ಹಿಂಸೆ (ಅಜಾಗರೂಕತೆಯೂ ಸೇರಿದಂತೆ), ನಾಗರಿಕ ಹೊಣೆಗಾರಿಕೆ, ಕಾನೂನು, ಕಟ್ಟುನಿಟ್ಟಿನ ಹೊಣೆಗಾರಿಕೆ, ಖಾತರಿಯ ಉಲ್ಲಂಘನೆ ಅಥವಾ ಬೇರೆ ಯಾವುದೇ ಹೊಣೆಗಾರಿಕೆಯ ಆಧಾರದ ಮೇಲೆ ಉಂಟಾಗಿದ್ದರೂ ಇದು ಅನ್ವಯಿಸುತ್ತದೆ. ಹಾಗೆಯೇ, ಅಂತಹ ಹಾನಿ ಸಂಭವಿಸುವ ಸಾಧ್ಯತೆಯ ಬಗ್ಗೆ Reddit ಸಂಸ್ಥೆಗಳಿಗೆ ತಿಳಿಸಲಾಗಿದ್ದರೂ, ಅವುಗಳಿಗೆ ಅದರ ಬಗ್ಗೆ ತಿಳಿದಿದ್ದರೂ ಅಥವಾ ತಿಳಿದಿರಬೇಕಾಗಿದ್ದರೂ ಸಹ Reddit ಸಂಸ್ಥೆಗಳು ಜವಾಬ್ದಾರರಾಗಿರುವುದಿಲ್ಲ. ಡೆವಲಪರ್ ನಿಯಮಗಳ ಮುಖ್ಯ ಉದ್ದೇಶ ಈಡೇರದಿದ್ದರೂ ಅಥವಾ ಅವುಗಳ ಅಡಿಯಲ್ಲಿ ನೀಡಿರುವ ಯಾವುದೇ ಸೀಮಿತ ಪರಿಹಾರವು ತನ್ನ ಉದ್ದೇಶವನ್ನು ಈಡೇರಿಸದಿದ್ದರೂ ಈ ಹೊಣೆಗಾರಿಕೆ ಮಿತಿ ಅನ್ವಯಿಸುತ್ತದೆ.
ಯಾವುದೇ ಸಂದರ್ಭದಲ್ಲಿಯೂ, ಡೆವಲಪರ್ ನಿಯಮಗಳಿಂದ ಅಥವಾ ಅವುಗಳಿಗೆ ಸಂಬಂಧಿಸಿದಂತೆ, ಯಾವುದೇ ರೀತಿಯ ಹೊಣೆಗಾರಿಕೆಯ ಆಧಾರದ ಮೇಲೆ Reddit ಸಂಸ್ಥೆಗಳ ಒಟ್ಟು ಹೊಣೆಗಾರಿಕೆ $100 ಅಮೆರಿಕನ್ ಡಾಲರ್ಗಿಂತ ಹೆಚ್ಚಿರಬಾರದು.
9.3 ನಷ್ಟ ಪರಿಹಾರ
(a) ನಿಮ್ಮ ಆಪ್ ಅಥವಾ ಆಪ್ನ ವಿಷಯ, (b) ನೀವು ಡೆವಲಪರ್ ನಿಯಮಗಳನ್ನು ಉಲ್ಲಂಘಿಸಿರುವುದು, ಅಥವಾ (c) ನೀವು ಯಾವುದೇ Reddit ಪರವಾನಗಿ ನೀಡಿರುವ ವಿಷಯಗಳನ್ನು ಪ್ರವೇಶಿಸಿ ಬಳಸಿರುವುದರಿಂದ ಅಥವಾ ಅದಕ್ಕೆ ಯಾವುದೇ ರೀತಿಯಲ್ಲಿ ಸಂಬಂಧಿಸಿದಂತೆ ಮೂರನೇ ವ್ಯಕ್ತಿಗಳು ಮಾಡುವ ಯಾವುದೇ ಹಕ್ಕು ದಾವೆಗಳು, ಮೊಕದ್ದಮೆಗಳು ಅಥವಾ ಕಾನೂನು ಕ್ರಮಗಳಿಂದ (“ಹಕ್ಕು ದಾವೆಗಳು”) Reddit ಸಂಸ್ಥೆಗಳು, ಅವುಗಳ ಪರವಾನಗಿದಾರರು ಮತ್ತು ಬಳಕೆದಾರರಿಗೆ ಉಂಟಾಗುವ ಎಲ್ಲಾ ವೆಚ್ಚಗಳು, ಹೊಣೆಗಾರಿಕೆಗಳು ಮತ್ತು ಖರ್ಚುಗಳನ್ನು (ವಕೀಲರ ಶುಲ್ಕವೂ ಸೇರಿದಂತೆ) ನೀವು ಭರಿಸಬೇಕು, ಅವರ ಪರವಾಗಿ ಕಾನೂನು ಹೋರಾಟ ನಡೆಸಬೇಕು ಮತ್ತು ಅವರನ್ನು ಯಾವುದೇ ನಷ್ಟ ಅಥವಾ ಹೊಣೆಗಾರಿಕೆಯಿಂದ ರಕ್ಷಿಸಬೇಕು ಎಂದು ಒಪ್ಪುತ್ತೀರಿ. ನೀವು ನಮಗೆ ನಷ್ಟಪರಿಹಾರ ನೀಡಬೇಕಾದ ಯಾವುದೇ ವಿಷಯದ ಕಾನೂನು ಹೋರಾಟವನ್ನು ನಾವು ನಮ್ಮ ನಿಯಂತ್ರಣದಲ್ಲಿ ನಡೆಸುವ ಹಕ್ಕನ್ನು ಕಾಯ್ದಿರಿಸಿಕೊಂಡಿದ್ದೇವೆ. ಹಾಗೆಯೇ, ಆ ಹಕ್ಕು ದಾವೆಗಳ ವಿರುದ್ಧ ನಾವು ನಡೆಸುವ ಕಾನೂನು ಹೋರಾಟಕ್ಕೆ ನೀವು ಸಹಕರಿಸಲು ಒಪ್ಪುತ್ತೀರಿ.
10. ಇತರೆ ವಿಷಯಗಳು
10.1 ಗೌಪ್ಯತೆ
ನಾವು ನಿಮಗೆ ಕಳುಹಿಸುವ ಮಾಹಿತಿಯಲ್ಲಿ ಮತ್ತು ನಮ್ಮ Reddit ಪರವಾನಗಿ ಪಡೆದ ವಿಷಯಗಳಲ್ಲಿ Reddit ನ ಗೌಪ್ಯ ಮಾಹಿತಿಯಿರಬಹುದು. “ಗೌಪ್ಯ ಮಾಹಿತಿ” ಎಂದರೆ, Reddit ನಿಮಗೆ ಬರವಣಿಗೆಯಲ್ಲಿ ನೀಡುವ ಮತ್ತು ನೀಡುವ ಸಮಯದಲ್ಲೇ ಗೌಪ್ಯ ಎಂದು ಗುರುತಿಸಿರುವ ಮಾಹಿತಿ, ಅಥವಾ ಆ ಮಾಹಿತಿಯ ಸ್ವರೂಪ ಮತ್ತು ಅದನ್ನು ಬಹಿರಂಗಪಡಿಸಿದ ಸಂದರ್ಭಗಳನ್ನು ನೋಡಿದಾಗ ಸಾಮಾನ್ಯವಾಗಿ ಗೌಪ್ಯವೆಂದು ಪರಿಗಣಿಸಬಹುದಾದ ಮಾಹಿತಿ.
ನೀವು ಗೌಪ್ಯ ಮಾಹಿತಿಯನ್ನು ಗೌಪ್ಯವಾಗಿಯೇ ಇಟ್ಟುಕೊಳ್ಳಬೇಕು. ಅದನ್ನು ಅನುಮತಿಯಿಲ್ಲದೆ ಬಳಸುವುದು, ಹಂಚುವುದು ಅಥವಾ ಪ್ರಕಟಿಸುವುದನ್ನು ತಡೆಯಲು, ಅದೇ ರೀತಿಯ ನಿಮ್ಮ ಸ್ವಂತ ಗೌಪ್ಯ ಮಾಹಿತಿಯನ್ನು ರಕ್ಷಿಸಲು ನೀವು ಬಳಸುವಷ್ಟೇ ಜಾಗ್ರತೆಯಿಂದ ರಕ್ಷಿಸಬೇಕು (ಯಾವುದೇ ಸಂದರ್ಭದಲ್ಲೂ ಸಮಂಜಸವಾದ ಜಾಗ್ರತೆಗಿಂತ ಕಡಿಮೆ ಇರಬಾರದು).
ಗೌಪ್ಯ ಮಾಹಿತಿಯಲ್ಲಿ ಈ ಕೆಳಗಿನ ಮಾಹಿತಿಗಳು ಸೇರಿರುವುದಿಲ್ಲ: (a) ನಿಮ್ಮ ತಪ್ಪಿಲ್ಲದೆ ಸಾರ್ವಜನಿಕವಾಗಿ ಲಭ್ಯವಾಗಿರುವ ಅಥವಾ ನಂತರ ಸಾರ್ವಜನಿಕವಾಗುವ ಮಾಹಿತಿ; (b) ಯಾವುದೇ ಗೌಪ್ಯತೆ ಕಾಪಾಡುವ ಬಾಧ್ಯತೆ ಇಲ್ಲದ ಮೂರನೇ ವ್ಯಕ್ತಿಯಿಂದ ನೀವು ಕಾನೂನುಬದ್ಧವಾಗಿ ಪಡೆದ ಮಾಹಿತಿ; (c) ಕಾನೂನಿನ ಪ್ರಕಾರ ಬಹಿರಂಗಪಡಿಸಬೇಕಾದ ಮಾಹಿತಿ; ಅಥವಾ (d) Reddit ನ ಮುಂಚಿತ ಲಿಖಿತ ಅನುಮತಿಯೊಂದಿಗೆ ಬಹಿರಂಗಪಡಿಸಿದ ಮಾಹಿತಿ. ನಿಮಗೆ ನೀಡಿರುವ ಗೌಪ್ಯ ಮಾಹಿತಿಯಲ್ಲಿರುವ ಎಲ್ಲಾ ಬೌದ್ಧಿಕ ಆಸ್ತಿ ಹಕ್ಕುಗಳು Reddit ನಲ್ಲೇ ಉಳಿಯುತ್ತವೆ.
10.2 ಡೆವಲಪರ್ ನಿಯಮಗಳಲ್ಲಿ ಬದಲಾವಣೆಗಳು
Reddit ಕಾಲಕಾಲಕ್ಕೆ ಡೆವಲಪರ್ ನಿಯಮಗಳು ಅಥವಾ ಡೆವಲಪರ್ ದಾಖಲಾತಿಗೆ ಬದಲಾವಣೆಗಳನ್ನು ಮಾಡಬಹುದು. ನಾವು ಬದಲಾವಣೆಗಳನ್ನು ಮಾಡಿದರೆ, ಪರಿಷ್ಕರಿಸಿದ ಡೆವಲಪರ್ ನಿಯಮಗಳನ್ನು ಪೋಸ್ಟ್ ಮಾಡುತ್ತೇವೆ. ಬದಲಾವಣೆಗಳು ನಮ್ಮ ಸ್ವಂತ ನಿರ್ಧಾರದ ಪ್ರಕಾರ ಪ್ರಮುಖವಾಗಿದ್ದರೆ, ನಿಮ್ಮ ಖಾತೆಗೆ ಸಂಬಂಧಿಸಿದ ಇಮೇಲ್ ವಿಳಾಸಕ್ಕೆ (ನೀವು ಇಮೇಲ್ ವಿಳಾಸ ನೀಡಿದ್ದರೆ), ಅಥವಾ ಡೆವಲಪರ್ ಸೇವೆಗಳನ್ನು ಬಳಸುವಾಗ ನಮಗೆ ನೀಡಿರುವ ಬೇರೆ ಇಮೇಲ್ ವಿಳಾಸಕ್ಕೆ ಇಮೇಲ್ ಕಳುಹಿಸುವ ಮೂಲಕ, ಅಥವಾ Services ಮೂಲಕ ಬೇರೆ ರೀತಿಯಲ್ಲಿ ನಿಮಗೆ ತಿಳಿಸಬಹುದು. ಡೆವಲಪರ್ ನಿಯಮಗಳನ್ನು ಪರಿಷ್ಕರಿಸಿದ ನಂತರವೂ ನೀವು ಡೆವಲಪರ್ ಸೇವೆಗಳನ್ನು ಅಥವಾ ಇತರ Reddit ಪರವಾನಗಿ ಪಡೆದ ವಿಷಯಗಳನ್ನು ಬಳಸುವುದನ್ನು ಅಥವಾ ಪ್ರವೇಶಿಸುವುದನ್ನು ಮುಂದುವರಿಸಿದರೆ, ಪರಿಷ್ಕರಿಸಿದ ಡೆವಲಪರ್ ನಿಯಮಗಳಿಗೆ ನೀವು ಬದ್ಧರಾಗಿರುವುದನ್ನು ಒಪ್ಪಿಕೊಂಡಂತೆ ಆಗುತ್ತದೆ. ಪರಿಷ್ಕರಿಸಿದ ಡೆವಲಪರ್ ನಿಯಮಗಳಿಗೆ ನೀವು ಒಪ್ಪದಿದ್ದರೆ, ಡೆವಲಪರ್ ಸೇವೆಗಳು ಮತ್ತು ಇತರ Reddit ಪರವಾನಗಿ ಪಡೆದ ವಿಷಯಗಳನ್ನು ಪ್ರವೇಶಿಸುವುದು ಹಾಗೂ ಬಳಸುವುದನ್ನು ನಿಲ್ಲಿಸಬೇಕು. ಡೆವಲಪರ್ ನಿಯಮಗಳು ಮತ್ತು ಡೆವಲಪರ್ ದಾಖಲಾತಿಯಲ್ಲಿ ಆಗಿರುವ ಬದಲಾವಣೆಗಳನ್ನು ಪರಿಶೀಲಿಸುವುದು ನಿಮ್ಮ ಜವಾಬ್ದಾರಿ.
10.3 ಅನ್ವಯಿಸುವ ಕಾನೂನು ಮತ್ತು ನ್ಯಾಯಾಲಯದ ವ್ಯಾಪ್ತಿ
ನಿಮಗೆ ಯಾವುದೇ ಸಮಸ್ಯೆ ಅಥವಾ ವಿವಾದ ಇದ್ದರೆ, ಅದನ್ನು ನಮ್ಮ ಗಮನಕ್ಕೆ ತಂದು, ನಮ್ಮೊಂದಿಗೆ ಅನೌಪಚಾರಿಕವಾಗಿ ಪರಿಹರಿಸಲು ಪ್ರಯತ್ನಿಸಬೇಕು. ನಿಮ್ಮ ಸಲಹೆಗಳು ಮತ್ತು ಸಮಸ್ಯೆಗಳನ್ನು ಇಲ್ಲಿ ನಮಗೆ ತಿಳಿಸಬಹುದು.
ಅನ್ವಯಿಸುವ ಕಾನೂನು ಅನುಮತಿಸುವಷ್ಟು ಮಟ್ಟಿಗೆ, Reddit ಪರವಾನಗಿ ಪಡೆದ ವಸ್ತುಗಳು ಅಥವಾ ಡೆವಲಪರ್ ನಿಯಮಗಳಿಗೆ ಸಂಬಂಧಿಸಿದ ಅಥವಾ ಅವುಗಳಿಂದ ಉಂಟಾಗುವ ಯಾವುದೇ ದಾವೆಗಳಿಗೆ, ಕಾನೂನುಗಳ ನಡುವಿನ ವ್ಯತ್ಯಾಸಕ್ಕೆ ಸಂಬಂಧಿಸಿದ ನಿಯಮಗಳನ್ನು ಪರಿಗಣಿಸದೆ, ಕ್ಯಾಲಿಫೋರ್ನಿಯಾ ರಾಜ್ಯದ ಕಾನೂನುಗಳು ಅನ್ವಯಿಸುತ್ತವೆ.
Reddit ಪರವಾನಗಿ ಪಡೆದ ವಸ್ತುಗಳು ಅಥವಾ ಡೆವಲಪರ್ ನಿಯಮಗಳಿಗೆ ಸಂಬಂಧಿಸಿದ, ಅನೌಪಚಾರಿಕವಾಗಿ ಪರಿಹರಿಸಲಾಗದ ಎಲ್ಲಾ ವಿವಾದಗಳನ್ನು ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಫೆಡರಲ್ ಅಥವಾ ರಾಜ್ಯ ನ್ಯಾಯಾಲಯಗಳಲ್ಲೇ ಮಾತ್ರ ದಾಖಲಿಸಬೇಕು. ನೀವು ಮತ್ತು Reddit, ಈ ನ್ಯಾಯಾಲಯಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಿಸುವ ಅಧಿಕಾರವಿದೆ ಎಂದು ಒಪ್ಪುತ್ತೀರಿ.
10.4 ಇಮೇಲ್ಗಳು ಮತ್ತು ಇತರ ಸೂಚನೆಗಳು
ಡೆವಲಪರ್ ನಿಯಮಗಳಿಗೆ ಒಪ್ಪಿಕೊಂಡು Reddit ಪರವಾನಗಿ ಪಡೆದ ವಸ್ತುಗಳನ್ನು ಪ್ರವೇಶಿಸಿ ಬಳಸುವ ಮೂಲಕ, ನಿಮ್ಮ ಖಾತೆಗೆ ಅಥವಾ ನೀವು, ಅಥವಾ ನಿಮ್ಮ ಪರವಾಗಿ Reddit ಗೆ ನೀಡಿರುವ ಯಾವುದೇ ಇಮೇಲ್ ವಿಳಾಸಕ್ಕೆ, ನಮ್ಮಿಂದ ಅಥವಾ ಡೆವಲಪರ್ ನಿಯಮಗಳು ಮತ್ತು Reddit ಪರವಾನಗಿ ಪಡೆದ ವಸ್ತುಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಸ್ವೀಕರಿಸಲು ನೀವು ಒಪ್ಪುತ್ತೀರಿ. Reddit ಪಕ್ಷಗಳಿಂದ ಬರುವ ಮಾಹಿತಿಗಳಲ್ಲಿ Reddit ಪರವಾನಗಿ ಪಡೆದ ವಸ್ತುಗಳನ್ನು ನೀವು ಪ್ರವೇಶಿಸಿ ಬಳಸುವುದಕ್ಕೆ ಸಂಬಂಧಿಸಿದ ಕಾರ್ಯಾಚರಣಾ ಮಾಹಿತಿಗಳು, ನಿಮ್ಮ ಆಪ್ನಲ್ಲಿ ಕೇಳಲಾದ ಬದಲಾವಣೆಗಳು ಅಥವಾ Reddit ಪರವಾನಗಿ ಪಡೆದ ವಸ್ತುಗಳಲ್ಲಿ ಮಾಡಲಾದ ಬದಲಾವಣೆಗಳ ಮಾಹಿತಿ, ನಾವು ಅಥವಾ ನಮ್ಮ ಮೂರನೇ ವ್ಯಕ್ತಿಯ ಪಾಲುದಾರರು ನಡೆಸುವ ಮಾರ್ಕೆಟಿಂಗ್ ಅಥವಾ ಪ್ರಚಾರಗಳ ಮಾಹಿತಿ, ಹಾಗೆಯೇ Reddit ಮತ್ತು ಉದ್ಯಮದ ಬೆಳವಣಿಗೆಗಳಿಗೆ ಸಂಬಂಧಿಸಿದ ಸುದ್ದಿಗಳು ಇರಬಹುದು. Reddit ಗೆ ನೀವು ನೀಡಿರುವ ಇಮೇಲ್ ವಿಳಾಸವನ್ನು ಬದಲಾಯಿಸಿದರೆ ಅಥವಾ ನಿಷ್ಕ್ರಿಯಗೊಳಿಸಿದರೆ, ನಿಮ್ಮ ಖಾತೆಯ ಮಾಹಿತಿಯನ್ನು ಅಪ್ಡೇಟ್ ಮಾಡಲು ನೀವು ಒಪ್ಪುತ್ತೀರಿ.
ಪ್ರಚಾರದ ಇಮೇಲ್ಗಳು ಬೇಡವೆಂದರೆ, ಆ ಇಮೇಲ್ನಲ್ಲಿರುವ ಅನ್ಸಬ್ಸ್ಕ್ರೈಬ್ ಆಯ್ಕೆಯನ್ನು ಬಳಸಿಕೊಂಡು ನಮ್ಮ ಪ್ರಚಾರದ ಇಮೇಲ್ ಪಟ್ಟಿಯಿಂದ ಹೊರಬರಬಹುದು.
ಡೆವಲಪರ್ ನಿಯಮಗಳು ಮತ್ತು Reddit ಪರವಾನಗಿ ಪಡೆದ ವಸ್ತುಗಳಿಗೆ ಸಂಬಂಧಿಸಿದಂತೆ ನೀಡಬೇಕಾದ ಅಥವಾ ನೀಡಲಾಗುವ ಎಲ್ಲಾ ಸೂಚನೆಗಳು ಅಥವಾ ಮಾಹಿತಿಗಳು ಲಿಖಿತ ರೂಪದಲ್ಲಿರಬೇಕು. ಅವುಗಳನ್ನು ಡೆವಲಪರ್ ಸೇವೆಗಳು ಅಥವಾ ಇತರ ಸೇವೆಗಳ ಮೂಲಕ ನಿಮ್ಮ ಖಾತೆಗೆ ಅಥವಾ ನಿಮ್ಮ ಖಾತೆಗೆ ಸಂಪರ್ಕಿಸಿರುವ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುತ್ತದೆ.
10.5 ಫೆಡರಲ್ ಸರ್ಕಾರಿ ಸಂಸ್ಥೆಗಳು
Reddit ಪರವಾನಗಿ ಪಡೆದ ವಸ್ತುಗಳನ್ನು ಸಂಪೂರ್ಣವಾಗಿ ಖಾಸಗಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅನ್ವಯಿಸುವ ಅಮೆರಿಕಾದ ಫೆಡರಲ್ ಖರೀದಿ ನಿಯಮಗಳು ಮತ್ತು ಸಂಬಂಧಿತ ಸರ್ಕಾರಿ ಸಂಸ್ಥೆಗಳ ಹೆಚ್ಚುವರಿ ನಿಯಮಗಳ ಅರ್ಥದಲ್ಲಿ, ಇವು ವಾಣಿಜ್ಯ ಕಂಪ್ಯೂಟರ್ ಸಾಫ್ಟ್ವೇರ್ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳಾಗಿವೆ. ನಮ್ಮಿಂದ ಮುಂಚಿತವಾಗಿ ಲಿಖಿತ ಅನುಮತಿ ಪಡೆಯದೆ U.S. ಸರ್ಕಾರಿ ಸಂಸ್ಥೆಗಳು Reddit ಪರವಾನಗಿ ಪಡೆದ ವಸ್ತುಗಳನ್ನು ಪ್ರವೇಶಿಸುವುದು ಅಥವಾ ಬಳಸುವುದು ನಿಷಿದ್ಧ. ಈ ಸಂಸ್ಥೆಗಳಿಗೆ Reddit ಅನುಮತಿ ನೀಡಿದ ಪ್ರವೇಶ ಮತ್ತು ಬಳಕೆ 48 C.F.R. 12.212 ಮತ್ತು 48 C.F.R. 227.7202-1 ರಿಂದ 227.7202-4 ರವರೆಗಿನ ನಿಯಮಗಳಿಗೆ ಅನುಗುಣವಾಗಿರಬೇಕು.
10.6 ರಫ್ತು ನಿಯಂತ್ರಣ
ನೀವು ಅನ್ವಯಿಸುವ ಎಲ್ಲಾ ವಿದೇಶಿ, ಫೆಡರಲ್, ರಾಜ್ಯ ಮತ್ತು ಸ್ಥಳೀಯ ಕಾನೂನುಗಳು, ನಿಯಮಗಳು ಮತ್ತು ನಿಯಮಾವಳಿಗಳನ್ನು ಪಾಲಿಸಬೇಕು. ಇದರಲ್ಲಿ ಲಂಚ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಕಾನೂನುಗಳೂ ಸೇರಿವೆ. Reddit ಪರವಾನಗಿ ಪಡೆದ ವಸ್ತುಗಳನ್ನು ಬಳಸುವಾಗ ಅಮೆರಿಕಾದ ರಫ್ತು ನಿಯಂತ್ರಣ ಕಾನೂನುಗಳು, ಡೇಟಾ ವರ್ಗಾವಣೆ ನಿಯಮಗಳು, ಆದೇಶಗಳು, ನಿರ್ದೇಶನಗಳು ಮತ್ತು ನಿಯಮಾವಳಿಗಳು ಅನ್ವಯಿಸಬಹುದು. ಹಾಗೆಯೇ, Reddit ಪರವಾನಗಿ ಪಡೆದ ವಸ್ತುಗಳನ್ನು ತಲುಪಿಸುವ ಅಥವಾ ಬಳಸುವ ದೇಶದ ಆಮದು ಮತ್ತು ಬಳಕೆಗೆ ಸಂಬಂಧಿಸಿದ ಕಾನೂನುಗಳೂ ಅನ್ವಯಿಸಬಹುದು. ಈ ಕಾನೂನುಗಳನ್ನು ನೀವು ಪಾಲಿಸುವುದಾಗಿ ಒಪ್ಪುತ್ತೀರಿ. ಈ ಕಾನೂನುಗಳ ಪ್ರಕಾರ, ಸಂಬಂಧಿತ ಸರ್ಕಾರಿ ಪ್ರಾಧಿಕಾರದಿಂದ ಪರವಾನಗಿ ಅಥವಾ ಅನುಮತಿ ಪಡೆಯದೆ Reddit ಪರವಾನಗಿ ಪಡೆದ ವಸ್ತುಗಳನ್ನು ಮಾರಾಟ ಮಾಡುವುದು, ಬಾಡಿಗೆಗೆ ನೀಡುವುದು, ಡೌನ್ಲೋಡ್ ಮಾಡುವುದು, ಸ್ಥಳಾಂತರಿಸುವುದು, ರಫ್ತು ಮಾಡುವುದು, ಮರುರಫ್ತು ಮಾಡುವುದು, ಬಿಡುಗಡೆ ಮಾಡುವುದು ಅಥವಾ ಗಡಿದಾಟಿ ವರ್ಗಾಯಿಸುವುದು ನಿಷಿದ್ಧ. ಇದರಲ್ಲಿ: (a) ಈ ಕಾನೂನುಗಳ ಅಡಿಯಲ್ಲಿ ನಿರ್ಬಂಧಿಸಲಾದ ಯಾವುದೇ ದೇಶಕ್ಕೆ ಅಥವಾ ವಿದೇಶಿ ವ್ಯಕ್ತಿಗೆ, ಇದರಲ್ಲಿ U.S. ಸರ್ಕಾರ ನಿರ್ಬಂಧಿಸಿರುವ, ಕಳವಳದ ದೇಶ ಎಂದು ಗುರುತಿಸಿರುವ ಅಥವಾ ವಿಶೇಷ ನಿಗಾ ಪಟ್ಟಿಯಲ್ಲಿರುವ ದೇಶಗಳೂ ಸೇರಿವೆ; (b) ನಿರ್ಬಂಧಿಸಲಾದ ಅಥವಾ ಅನುಮತಿ ನಿರಾಕರಿಸಲಾದ ಅಂತಿಮ ಬಳಕೆದಾರರಿಗೆ, ಇದರಲ್ಲಿ ಅಮೆರಿಕಾದ ವಿದೇಶಿ ಆಸ್ತಿಗಳ ನಿಯಂತ್ರಣ ಕಚೇರಿಯಿಂದ ನಿಷೇಧಿಸಲಾದ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯೂ ಸೇರಿದೆ; ಅಥವಾ (c) ನಿರ್ಬಂಧಿಸಲಾದ ಯಾವುದೇ ಬಳಕೆಗೆ. ನಿಮ್ಮ ಆಪ್ ಮತ್ತು ಅದರಲ್ಲಿರುವ ವಿಷಯಕ್ಕೆ ಅಗತ್ಯವಿರುವ ಎಲ್ಲಾ ನೋಂದಣಿಗಳು ಮತ್ತು ಪರವಾನಗಿಗಳನ್ನು ನೀವು ಹೊಂದಿರಬೇಕು.
10.7 ಸಾಮಾನ್ಯ ವಿಷಯಗಳು
Reddit, ಡೆವಲಪರ್ ನಿಯಮಗಳ ಅಡಿಯಲ್ಲಿ ತನ್ನ ಯಾವುದೇ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಬೇರೆಯವರಿಗೆ ವರ್ಗಾಯಿಸಬಹುದು. Redditನ ಮುಂಚಿತ ಲಿಖಿತ ಒಪ್ಪಿಗೆ ಇಲ್ಲದೆ, ಡೆವಲಪರ್ ನಿಯಮಗಳ ಅಡಿಯಲ್ಲಿ ನಿಮಗೆ ಇರುವ ಯಾವುದೇ ಹಕ್ಕುಗಳು ಅಥವಾ ಜವಾಬ್ದಾರಿಗಳನ್ನು (ನಿಮ್ಮ ಆಪ್ನ ಮಾರಾಟ, ಪರವಾನಗಿ ನೀಡುವುದು ಅಥವಾ ಮಾಲೀಕತ್ವವನ್ನು ಬೇರೆ ರೀತಿಯಲ್ಲಿ ವರ್ಗಾಯಿಸುವುದೂ ಸೇರಿ) ಯಾವುದೇ ಮೂರನೇ ವ್ಯಕ್ತಿಗೆ ವರ್ಗಾಯಿಸಲು, ಉಪ-ಪರವಾನಗಿ ನೀಡಲು ಅಥವಾ ವಹಿಸಿಕೊಡಲು ನಿಮಗೆ ಅನುಮತಿ ಇಲ್ಲ. ಈ ನಿಯಮವನ್ನು ಉಲ್ಲಂಘಿಸಿ ಮಾಡುವ ಯಾವುದೇ ಹಕ್ಕು ವರ್ಗಾವಣೆ, ಜವಾಬ್ದಾರಿ ವಹಿಸಿಕೊಡುವಿಕೆ ಅಥವಾ ಮಾಲೀಕತ್ವ ವರ್ಗಾವಣೆ ಅಮಾನ್ಯವಾಗಿರುತ್ತದೆ.
Reddit ಪರವಾನಗಿ ಪಡೆದ ವಸ್ತುಗಳನ್ನು ಪ್ರವೇಶಿಸಿ ಬಳಸಲು, ಡೆವಲಪರ್ ನಿಯಮಗಳನ್ನು ಪರಿಶೀಲಿಸಲು, ಅದರ ಬಗ್ಗೆ ಯೋಚಿಸಲು ಮತ್ತು ಅರ್ಥಮಾಡಿಕೊಳ್ಳಲು ನಿಮಗೆ ಸಾಕಷ್ಟು ಅವಕಾಶ ಸಿಕ್ಕಿದೆ ಎಂದು ನೀವು ಒಪ್ಪುತ್ತೀರಿ. ಡೆವಲಪರ್ ನಿಯಮಗಳು ನಿಮಗೆ ಸಂಪೂರ್ಣವಾಗಿ ಅರ್ಥವಾಗಿದೆ ಮತ್ತು ನೀವು ಸ್ವಯಂ ಇಚ್ಛೆಯಿಂದ ಅದಕ್ಕೆ ಒಪ್ಪುತ್ತೀರಿ ಎಂದು ಸಹ ಒಪ್ಪಿಕೊಳ್ಳುತ್ತೀರಿ. ಡೆವಲಪರ್ ನಿಯಮಗಳಿಗೆ ಒಪ್ಪಿಕೊಳ್ಳುವುದು ಸೂಕ್ತವೇ ಎಂಬುದರ ಬಗ್ಗೆ, ನೀವು ಆಯ್ಕೆ ಮಾಡಿಕೊಂಡ ವಕೀಲರಿಂದ ಸ್ವತಂತ್ರ ಕಾನೂನು ಸಲಹೆ ಪಡೆದಿದ್ದೀರಿ ಅಥವಾ ಅಂತಹ ಸಲಹೆ ಪಡೆಯಲು ನಿಮಗೆ ಅವಕಾಶವಿತ್ತು ಎಂದು ನೀವು ಒಪ್ಪಿಕೊಳ್ಳುತ್ತೀರಿ.
Reddit ಪರವಾನಗಿ ಪಡೆದ ವಸ್ತುಗಳನ್ನು ನೀವು ಪ್ರವೇಶಿಸಿ ಬಳಸುವುದು ಮತ್ತು ಡೆವಲಪರ್ ನಿಯಮಗಳಿಗೆ ಒಪ್ಪಿಕೊಳ್ಳುವುದು, ನಿಮ್ಮ ಮತ್ತು Reddit ನಡುವೆ ಯಾವುದೇ ಏಜೆನ್ಸಿ, ಪಾಲುದಾರಿಕೆ ಅಥವಾ ಜಂಟಿ ಉದ್ಯಮ ಸಂಬಂಧವನ್ನು ಸ್ಥಾಪಿಸುವುದಿಲ್ಲ. ಸ್ಪಷ್ಟವಾಗಿ ಹೇಳಿರುವ ಸಂದರ್ಭಗಳನ್ನು ಹೊರತುಪಡಿಸಿ, ಡೆವಲಪರ್ ನಿಯಮಗಳು ಯಾವುದೇ ಮೂರನೇ ವ್ಯಕ್ತಿಗೆ ಯಾವುದೇ ಹಕ್ಕು ಅಥವಾ ಪ್ರಯೋಜನವನ್ನು ನೀಡುವುದಿಲ್ಲ.
ಡೆವಲಪರ್ ನಿಯಮಗಳು ಎಲ್ಲರಿಗೂ ಪ್ರತ್ಯೇಕ ಹಕ್ಕು ನೀಡುವ ಒಪ್ಪಂದವಲ್ಲ. ನಿಮ್ಮ ಆಪ್ ಅಥವಾ ಇತರ ಉತ್ಪನ್ನಗಳು ಅಥವಾ ಸೇವೆಗಳಿಗೆ ಹೋಲುವ ಅಥವಾ ಅವುಗಳೊಂದಿಗೆ ಸ್ಪರ್ಧಿಸುವ ಉತ್ಪನ್ನಗಳು ಅಥವಾ ಸೇವೆಗಳನ್ನು Reddit ಅಭಿವೃದ್ಧಿಪಡಿಸಬಹುದು ಎಂಬುದನ್ನು ನೀವು ಒಪ್ಪುತ್ತೀರಿ.
ಡೆವಲಪರ್ ನಿಯಮಗಳಲ್ಲಿರುವ ಶೀರ್ಷಿಕೆಗಳನ್ನು ಕೇವಲ ಸುಲಭವಾಗಿ ಗುರುತಿಸಲು ಬಳಸಲಾಗಿದೆ. ಅವುಗಳ ಅರ್ಥವನ್ನು ವಿವರಿಸುವಾಗ ಅಥವಾ ಅರ್ಥೈಸುವಾಗ ಶೀರ್ಷಿಕೆಗಳನ್ನು ಪರಿಗಣಿಸಲಾಗುವುದಿಲ್ಲ. ಡೆವಲಪರ್ ನಿಯಮಗಳ ಉದ್ದೇಶಕ್ಕಾಗಿ: (a) “ಒಳಗೊಂಡಿದೆ”, “ಒಳಗೊಂಡಿವೆ” ಮತ್ತು “ಒಳಗೊಂಡಂತೆ” ಎಂಬ ಪದಗಳ ನಂತರ “ಯಾವುದೇ ಮಿತಿಯಿಲ್ಲದೆ” ಎಂಬ ಅರ್ಥವಿದೆ ಎಂದು ಪರಿಗಣಿಸಲಾಗುತ್ತದೆ; (b) “ಅವುಗಳೆಂದರೆ”, “ಉದಾಹರಣೆಗೆ”, “ಅಂದರೆ” ಮತ್ತು ಇವುಗಳಿಂದ ಬಂದ ಇತರ ಪದಗಳು ಉದಾಹರಣೆಗಾಗಿ ಎಂದು ಅರ್ಥ. ಈ ಪದಗಳ ನಂತರ ನೀಡಿರುವ ವಿಷಯಗಳನ್ನು ಸಂಪೂರ್ಣ ಪಟ್ಟಿಯೆಂದು ಪರಿಗಣಿಸಲಾಗುವುದಿಲ್ಲ; ಮತ್ತು (c) “ಅಥವಾ” ಎಂಬ ಪದವನ್ನು “ಮತ್ತು/ಅಥವಾ” ಎಂಬ ಒಳಗೊಂಡ ಅರ್ಥದಲ್ಲಿ ಬಳಸಲಾಗಿದೆ. “ಅಥವಾ”, “ಯಾವುದೇ” ಮತ್ತು “ಇವೆರಡರಲ್ಲಿ ಯಾವುದಾದರೂ” ಎಂಬ ಪದಗಳು ಯಾವುದನ್ನೂ ಹೊರತುಪಡಿಸುವ ಅರ್ಥವನ್ನು ಹೊಂದಿರುವುದಿಲ್ಲ. ಒಪ್ಪಂದದ ಭಾಷೆಯನ್ನು ಯಾವುದೇ ಒಂದು ಪಕ್ಷವೇ ಸಿದ್ಧಪಡಿಸಿದೆ ಎಂಬ ಕಾರಣಕ್ಕೆ, ಅದರಲ್ಲಿರುವ ಯಾವುದೇ ಅಸ್ಪಷ್ಟತೆಯನ್ನು ಆ ಪಕ್ಷದ ವಿರುದ್ಧವಾಗಿ ಅರ್ಥೈಸಲಾಗುವುದಿಲ್ಲ.
ಡೆವಲಪರ್ ನಿಯಮಗಳ ಯಾವುದೇ ನಿಯಮ ಅಥವಾ ಅದರ ಯಾವುದೇ ನಿಯಮದ ಅನ್ವಯವು ಕಾನೂನಿಗೆ ವಿರುದ್ಧವಾಗಿದೆ, ಅಮಾನ್ಯವಾಗಿದೆ ಅಥವಾ ಜಾರಿಗೆ ತರಲು ಸಾಧ್ಯವಿಲ್ಲ ಎಂದು ತೀರ್ಮಾನಿಸಲಾದರೆ, ಆ ನಿಯಮವನ್ನು ಸಾಧ್ಯವಾದಷ್ಟು ಮಟ್ಟಿಗೆ ಜಾರಿಗೆ ತರಲಾಗುತ್ತದೆ. ಡೆವಲಪರ್ ನಿಯಮಗಳ ಉಳಿದ ಎಲ್ಲಾ ನಿಯಮಗಳು ಸಂಪೂರ್ಣವಾಗಿ ಜಾರಿಯಲ್ಲಿರುತ್ತವೆ.
ಡೆವಲಪರ್ ನಿಯಮಗಳು, ಬಳಕೆದಾರರ ಒಪ್ಪಂದ (ಈ ಉಲ್ಲೇಖದ ಮೂಲಕ ಡೆವಲಪರ್ ನಿಯಮಗಳ ಭಾಗವಾಗಿರುವ ಒಪ್ಪಂದ) ಮತ್ತು ಡೆವಲಪರ್ ನಿಯಮಗಳಲ್ಲಿ ಉಲ್ಲೇಖದ ಮೂಲಕ ಸ್ಪಷ್ಟವಾಗಿ ಸೇರಿಸಲಾದ ಇತರ ಎಲ್ಲಾ ಒಪ್ಪಂದಗಳು, ನಿಮ್ಮ ಮತ್ತು Reddit ನಡುವಿನ ಕಾನೂನುಬದ್ಧವಾಗಿ ಬದ್ಧವಾಗಿರುವ ಒಪ್ಪಂದವಾಗಿವೆ. Reddit ಪರವಾನಗಿ ಪಡೆದ ವಸ್ತುಗಳಿಗೆ ಸಂಬಂಧಿಸಿದ ವಿಷಯದಲ್ಲಿ, ಈ ಒಪ್ಪಂದಗಳೇ ಪಕ್ಷಗಳ ನಡುವಿನ ಸಂಪೂರ್ಣ ಒಪ್ಪಂದವಾಗಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪಕ್ಷಗಳ ನಡುವೆ ಹಿಂದೆ ನಡೆದ ಎಲ್ಲಾ ಮಾತುಕತೆಗಳು, ಹೇಳಿಕೆಗಳು, ತಿಳುವಳಿಕೆಗಳು ಮತ್ತು ಒಪ್ಪಂದಗಳನ್ನು, ಅವು ಮೌಖಿಕವಾಗಿರಲಿ ಅಥವಾ ಲಿಖಿತವಾಗಿರಲಿ, ಬದಲಿಸುತ್ತವೆ. ಇದರಲ್ಲಿ ಡೆವಲಪರ್ ನಿಯಮಗಳ ಹಿಂದಿನ ಆವೃತ್ತಿಗಳೂ ಸೇರಿವೆ.
ಡೆವಲಪರ್ ನಿಯಮಗಳ ಬಗ್ಗೆ ನಿಮಗೆ ಯಾವುದೇ ಪ್ರಶ್ನೆಗಳಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.