ಡೇಟಾ API ನಿಯಮಗಳು

ಡೇಟಾ API ನಿಯಮಗಳು

ಜೂನ್ 19, 2023ರಿಂದ ಜಾರಿಗೆ ಬಂದಿದೆ. ಕೊನೆಯದಾಗಿ ಜುಲೈ 20, 2026ರಂದು ಪರಿಷ್ಕರಿಸಲಾಗಿದೆ

ನಮ್ಮ ಡೇಟಾ APIs ಮತ್ತು ಅವುಗಳ ಮೂಲಕ Reddit ನೀಡುವ ಸಂಬಂಧಿತ ಡೇಟಾ, ಕೋಡ್ ಹಾಗೂ ಇತರ ವಿಷಯಗಳ ಬಗ್ಗೆ ವಿಚಾರಿಸಿದ್ದಕ್ಕಾಗಿ ಧನ್ಯವಾದಗಳು. ಇವುಗಳನ್ನು ಒಟ್ಟಾಗಿ (“ಡೇಟಾ APIs”) ಎಂದು ಕರೆಯಲಾಗುತ್ತದೆ. ಈ ಡೇಟಾ API ನಿಯಮಗಳು, ಡೆವಲಪರ್ ನಿಯಮಗಳು, ನಮ್ಮ ಬಳಕೆದಾರರ ಒಪ್ಪಂದ, ಡೇಟಾ APIs ಗೆ ಸಂಬಂಧಿಸಿದ ಡೆವಲಪರ್ ಡಾಕ್ಯುಮೆಂಟೇಷನ್‌ನಲ್ಲಿ ಇರುವ ಹೆಚ್ಚುವರಿ ನಿಯಮಗಳು, ಹಾಗೆಯೇ ಅನ್ವಯವಾಗುವ ನೀತಿಗಳು ಮತ್ತು ಮಾರ್ಗಸೂಚಿಗಳನ್ನು ಒಟ್ಟಾಗಿ “ಡೇಟಾ API ನಿಯಮಗಳು” ಎಂದು ಕರೆಯುತ್ತೇವೆ. ಡೇಟಾ API ನಿಯಮಗಳಲ್ಲಿ ಡೆವಲಪರ್ ನಿಯಮಗಳು ಮತ್ತು ನಮ್ಮ ಬಳಕೆದಾರರ ಒಪ್ಪಂದದಲ್ಲಿ ವಿವರಿಸಿರುವ ಕೆಲವು ಪದಗಳು ಮತ್ತು ನಿಯಮಗಳೂ ಸೇರಿವೆ.

ಡೇಟಾ APIs ಅನ್ನು ಬಳಸುವ ಮೂಲಕ, ಡೆವಲಪರ್ ನಿಯಮಗಳು ಸೇರಿದಂತೆ ಡೇಟಾ API ನಿಯಮಗಳನ್ನು Reddit ಜೊತೆ ಒಪ್ಪಿಕೊಂಡಂತೆ ಆಗುತ್ತದೆ. ಡೇಟಾ APIs ಅಥವಾ ನಮ್ಮ ಸೇವೆಗಳಿಂದ ನೀವು ಪಡೆಯುವ ಇತರ ಯಾವುದೇ ವಿಷಯಗಳನ್ನು, ಡೇಟಾ APIs ಬಳಸಿ ಪಡೆದಿರಲಿ ಅಥವಾ ಬೇರೆ ರೀತಿಯಲ್ಲಿ ಪಡೆದಿರಲಿ, ಡೇಟಾ API ನಿಯಮಗಳ ಪ್ರಕಾರವೇ ಬಳಸಬೇಕು.

1. ನೋಂದಣಿ

1.1 ಅರ್ಹತೆ

ಈ ಕೆಳಗಿನ ಸಂದರ್ಭಗಳಲ್ಲಿ ನೀವು ಡೇಟಾ APIs ಬಳಸಬಾರದು ಮತ್ತು ಡೇಟಾ API ನಿಯಮಗಳನ್ನು ಒಪ್ಪಿಕೊಳ್ಳಬಾರದು: (a) Reddit ಜೊತೆ ಕಾನೂನುಬದ್ಧ ಒಪ್ಪಂದ ಮಾಡಿಕೊಳ್ಳುವಷ್ಟು ಕಾನೂನುಬದ್ಧ ವಯಸ್ಸು ನಿಮಗೆ ಇಲ್ಲದಿದ್ದರೆ; ಅಥವಾ (b) ನೀವು ವಾಸಿಸುವ ದೇಶ ಅಥವಾ ಡೇಟಾ APIs ಬಳಸುವ ದೇಶ ಸೇರಿದಂತೆ, ಅಮೆರಿಕ ಸಂಯುಕ್ತ ಸಂಸ್ಥಾನ ಅಥವಾ ಇತರ ದೇಶಗಳ ಅನ್ವಯವಾಗುವ ಕಾನೂನುಗಳ ಪ್ರಕಾರ ಡೇಟಾ APIs ಬಳಸಲು ಅಥವಾ ಪಡೆಯಲು ನಿಮಗೆ ನಿಷೇಧವಿದ್ದರೆ.

1.2 ಸಂಸ್ಥೆಯ ಬಳಕೆ

ನಿಮ್ಮ ಉದ್ಯೋಗದಾತರ ಪರವಾಗಿ ಅಥವಾ ಬೇರೆ ಯಾವುದೇ ಸಂಸ್ಥೆಯ ಪರವಾಗಿ ಡೇಟಾ API ನಿಯಮಗಳನ್ನು ಒಪ್ಪಿಕೊಳ್ಳುತ್ತಿದ್ದರೆ, ನೀವು ಈ ಕೆಳಗಿನವುಗಳನ್ನು ಖಚಿತಪಡಿಸುತ್ತೀರಿ: (a) ಡೇಟಾ API ನಿಯಮಗಳಿಗೆ ನಿಮ್ಮ ಉದ್ಯೋಗದಾತರನ್ನು ಅಥವಾ ಸಂಬಂಧಿಸಿದ ಸಂಸ್ಥೆಯನ್ನು ಬದ್ಧಗೊಳಿಸುವ ಸಂಪೂರ್ಣ ಕಾನೂನುಬದ್ಧ ಅಧಿಕಾರ ನಿಮಗಿದೆ; (b) ನೀವು ಡೇಟಾ API ನಿಯಮಗಳನ್ನು ಓದಿ ಅರ್ಥಮಾಡಿಕೊಂಡಿದ್ದೀರಿ; ಮತ್ತು (c) ನೀವು ಪ್ರತಿನಿಧಿಸುತ್ತಿರುವ ವ್ಯಕ್ತಿ ಅಥವಾ ಸಂಸ್ಥೆಯ ಪರವಾಗಿ ಡೇಟಾ API ನಿಯಮಗಳನ್ನು ಒಪ್ಪಿಕೊಳ್ಳುತ್ತೀರಿ. ನಿಮ್ಮ ಉದ್ಯೋಗದಾತರನ್ನು ಅಥವಾ ಸಂಬಂಧಿಸಿದ ಸಂಸ್ಥೆಯನ್ನು ಈ ನಿಯಮಗಳಿಗೆ ಬದ್ಧಗೊಳಿಸುವ ಕಾನೂನುಬದ್ಧ ಅಧಿಕಾರ ನಿಮಗೆ ಇಲ್ಲದಿದ್ದರೆ, ಡೇಟಾ APIs ಬಳಸಬೇಡಿ.

1.3 ಸಂಪರ್ಕ ಮಾಹಿತಿ

ಡೇಟಾ APIs ಬಳಸಲು, ನೀವು ನಿಮ್ಮ ಗುರುತಿನ ಮಾಹಿತಿಯನ್ನು (ಉದಾಹರಣೆಗೆ, ಸಂಪರ್ಕ ವಿವರಗಳನ್ನು) ನೀಡಬೇಕು. ಈ ಮಾಹಿತಿಯು ಎಲ್ಲ ಸಮಯದಲ್ಲೂ ಸರಿಯಾಗಿರಬೇಕು ಮತ್ತು ನವೀಕರಿಸಿರಬೇಕು.

2. ಡೇಟಾ APIs ನ ನಿಮ್ಮ ಬಳಕೆ

2.1 ಪರವಾನಗಿ

ಡೇಟಾ API ನಿಯಮಗಳನ್ನು ನೀವು ಸಂಪೂರ್ಣವಾಗಿ ಮತ್ತು ನಿರಂತರವಾಗಿ ಪಾಲಿಸುವ ಷರತ್ತಿನ ಮೇಲೆ, ಡೇಟಾ APIs ಅನ್ನು ಪ್ರವೇಶಿಸಲು ಮತ್ತು ಬಳಸಲು Reddit ನಿಮಗೆ ವಿಶೇಷ ಹಕ್ಕು ನೀಡುವುದಿಲ್ಲ. ಈ ಹಕ್ಕನ್ನು ಬೇರೆಯವರಿಗೆ ವರ್ಗಾಯಿಸಲು ಅಥವಾ ಉಪ-ಪರವಾನಗಿ ನೀಡಲು ಸಾಧ್ಯವಿಲ್ಲ ಮತ್ತು Reddit ಇದನ್ನು ಹಿಂಪಡೆಯಬಹುದು. ಡೇಟಾ API ನಿಯಮಗಳಲ್ಲಿ ಸ್ಪಷ್ಟವಾಗಿ ಅನುಮತಿಸಿರುವ ರೀತಿಯಲ್ಲಿ ಮತ್ತು ಅದರ ಪ್ರಕಾರ ಮಾತ್ರ ಡೇಟಾ APIs ಅನ್ನು ಪ್ರವೇಶಿಸಲು ಮತ್ತು ಬಳಸಲು ಈ ಹಕ್ಕನ್ನು ನೀಡಲಾಗಿದೆ. ನಿಮಗೆ ಸ್ಪಷ್ಟವಾಗಿ ನೀಡದ ಉಳಿದ ಎಲ್ಲ ಹಕ್ಕುಗಳು Reddit ಬಳಿಯೇ ಇರುತ್ತವೆ.

2.2 ಅಪ್ಲಿಕೇಶನ್ ಬಳಕೆದಾರರು

ನಿಮ್ಮ ಅಪ್ಲಿಕೇಶನ್ ಬಳಕೆದಾರರು, (ಅಂತಿಮ ಬಳಕೆದಾರರು ಸೇರಿದಂತೆ), ಡೇಟಾ API ನಿಯಮಗಳಿಗೆ ಸಂಬಂಧಿಸಿದ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಪಾಲಿಸುವಂತೆ ನೋಡಿಕೊಳ್ಳಲು ನೀವು ಒಪ್ಪುತ್ತೀರಿ.

2.3 Reddit ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಪಾಲಿಸುವುದು

ಕಾಲಕಾಲಕ್ಕೆ ಬದಲಾವಣೆ ಮಾಡಬಹುದಾದ Reddit ಬಳಕೆದಾರರ ಒಪ್ಪಂದ ಮತ್ತು ಗೌಪ್ಯತೆ ನೀತಿಯನ್ನು ಪಾಲಿಸಲು ನೀವು ಒಪ್ಪುತ್ತೀರಿ. ಇದಲ್ಲದೆ, ಡೇಟಾ API ಡೆವಲಪರ್ ಡಾಕ್ಯುಮೆಂಟೇಷನ್ ಅನ್ನು ಪಾಲಿಸಲು ನೀವು ಒಪ್ಪುತ್ತೀರಿ.

2.4 ಬಳಕೆದಾರರ ವಿಷಯ

ನಮ್ಮ ಸೇವೆಗಳ ಮೂಲಕ ಬಳಕೆದಾರರು ರಚಿಸುವ ಅಥವಾ ನಮ್ಮ ಸೇವೆಗಳಿಗೆ ಸಲ್ಲಿಸುವ ವಿಷಯವನ್ನು (“ಬಳಕೆದಾರರ ವಿಷಯ”) ಎಂದು ಕರೆಯಲಾಗುತ್ತದೆ. ಈ ವಿಷಯದ ಮಾಲೀಕತ್ವ Reddit ಗೆ ಅಲ್ಲ, ಅದನ್ನು ರಚಿಸಿದ ಬಳಕೆದಾರರದ್ದೇ ಆಗಿರುತ್ತದೆ. ನೀವು ಡೇಟಾ API ನಿಯಮಗಳನ್ನು ಸಂಪೂರ್ಣವಾಗಿ ಮತ್ತು ನಿರಂತರವಾಗಿ ಪಾಲಿಸುವ ಷರತ್ತಿನ ಮೇಲೆ, ನಿಮ್ಮ ಅಪ್ಲಿಕೇಶನ್ ಬಳಕೆದಾರರಿಗೆ ನಿಮ್ಮ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲು, ಬಳಸಲು, ಹಂಚಲು ಮತ್ತು ನಡೆಸಲು ಅಗತ್ಯವಿರುವಷ್ಟರ ಮಟ್ಟಿಗೆ ಮಾತ್ರ ಡೇಟಾ API ಬಳಸಿ ಬಳಕೆದಾರರ ವಿಷಯವನ್ನು ನಕಲಿಸಲು ಮತ್ತು ಪ್ರದರ್ಶಿಸಲು Reddit ನಿಮಗೆ ವಿಶೇಷವಲ್ಲದ, ಬೇರೆಯವರಿಗೆ ವರ್ಗಾಯಿಸಲಾಗದ, ಉಪ-ಪರವಾನಗಿ ನೀಡಲಾಗದ ಮತ್ತು ಹಿಂಪಡೆಯಬಹುದಾದ ಹಕ್ಕನ್ನು ನೀಡುತ್ತದೆ. ಅಂತಹ ಪ್ರದರ್ಶನಕ್ಕಾಗಿ ಅಗತ್ಯವಿರುವಂತೆ ರೂಪಿಸುವುದನ್ನು ಹೊರತುಪಡಿಸಿ, ಬಳಕೆದಾರರ ವಿಷಯವನ್ನು ನೀವು ಬದಲಾಯಿಸಬಾರದು. ಬಳಕೆದಾರರ ವಿಷಯದ ಮಾಲೀಕರು ಅದರ ಬಳಕೆಯ ಮೇಲೆ ವಿಧಿಸಿರುವ ಯಾವುದೇ ನಿಯಮಗಳು ಅಥವಾ ನಿರ್ಬಂಧಗಳನ್ನು ನೀವು ಪಾಲಿಸಬೇಕು. ಇದರಲ್ಲಿ “ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ” ಎಂಬ ಸೂಚನೆಗಳು, ಕ್ರಿಯೇಟಿವ್ ಕಾಮನ್ಸ್ ಪರವಾನಗಿಗಳು ಅಥವಾ ನಿಮ್ಮ ಮತ್ತು ಅದರ ಮಾಲೀಕರ ನಡುವೆ ಒಪ್ಪಿಕೊಂಡಿರುವ ಇತರ ನಿಯಮಗಳು ಮತ್ತು ಷರತ್ತುಗಳು ಇರಬಹುದು. ಈ ವಿಭಾಗದಲ್ಲಿ ಸ್ಪಷ್ಟವಾಗಿ ಅನುಮತಿಸಿರುವುದನ್ನು ಹೊರತುಪಡಿಸಿ, ಬೇರೆ ಯಾವುದೇ ಹಕ್ಕುಗಳು ಅಥವಾ ಪರವಾನಗಿಗಳನ್ನು ನೀಡಲಾಗುವುದಿಲ್ಲ ಅಥವಾ ನೀಡಲಾಗಿದೆ ಎಂದು ಪರಿಗಣಿಸಲಾಗುವುದಿಲ್ಲ. ಇದರಲ್ಲಿ, ಸಂಬಂಧಿತ ಬಳಕೆದಾರರ ವಿಷಯದ ಹಕ್ಕುದಾರರ ಸ್ಪಷ್ಟ ಅನುಮತಿ ಇಲ್ಲದೆ, ಬಳಕೆದಾರರ ವಿಷಯವನ್ನು ಯಂತ್ರ ಕಲಿಕೆ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮಾದರಿಯ ತರಬೇತಿಗಾಗಿ ಬಳಸುವಂತಹ ಇತರ ಉದ್ದೇಶಗಳಿಗೆ ಬಳಸುವ ಹಕ್ಕು ಕೂಡ ಸೇರಿದೆ.

2.5 ತೆಗೆದುಹಾಕುವುದು

Reddit ನಿಯಮಗಳ ಪ್ರಕಾರ, ಬಳಕೆದಾರರ ವಿಷಯವನ್ನು ತೆಗೆದುಹಾಕುವಂತೆ ನಿಮಗೆ ಸೂಚನೆಗಳು ಅಥವಾ ವಿನಂತಿಗಳು ಬರಬಹುದು. ಅಗತ್ಯವಿದ್ದರೆ, ಈ ವಿನಂತಿಗಳನ್ನು ಇಲ್ಲಿ ಸಲ್ಲಿಸುವ ಮೂಲಕ Reddit ಗೆ ಕಳುಹಿಸಬೇಕು.

2.6 ಗೌಪ್ಯತಾ ನೀತಿ

ನಿಮ್ಮ ಅಪ್ಲಿಕೇಶನ್‌ನಲ್ಲಿ ಗೌಪ್ಯತಾ ನೀತಿಯ ಮೂಲಕ, ನಿಮ್ಮ ಅಪ್ಲಿಕೇಶನ್ ಬಳಕೆದಾರರು ಮತ್ತು ಇತರ ಭೇಟಿ ನೀಡುವವರಿಂದ ಸಂಗ್ರಹಿಸಿದ ಮಾಹಿತಿಯನ್ನು ನೀವು ಹೇಗೆ ಸಂಗ್ರಹಿಸುತ್ತೀರಿ, ಬಳಸುತ್ತೀರಿ, ಸಂಗ್ರಹಿಸಿಡುತ್ತೀರಿ ಮತ್ತು ಹಂಚಿಕೊಳ್ಳುತ್ತೀರಿ ಎಂಬುದನ್ನು ತಿಳಿಸಬೇಕು. ಅನ್ವಯವಾಗುವಲ್ಲಿ, ಮೂರನೇ ವ್ಯಕ್ತಿಗಳು (ಉದಾಹರಣೆಗೆ, ಜಾಹೀರಾತುದಾರರು) ನಿಮ್ಮ ಅಪ್ಲಿಕೇಶನ್ ಬಳಕೆದಾರರು ಮತ್ತು ಇತರ ಭೇಟಿ ನೀಡುವವರಿಗೆ ವಿಷಯ ಅಥವಾ ಜಾಹೀರಾತುಗಳನ್ನು ನೇರವಾಗಿ ತೋರಿಸಬಹುದು ಮತ್ತು ಅವರಿಂದ ಮಾಹಿತಿಯನ್ನು ನೇರವಾಗಿ ಸಂಗ್ರಹಿಸಬಹುದು ಎಂಬುದನ್ನೂ ತಿಳಿಸಬೇಕು. ಇದರಲ್ಲಿ ಕುಕೀಗಳನ್ನು ಬಳಸುವುದೂ ಸೇರಿರಬಹುದು. ಇದಲ್ಲದೆ, ಡೇಟಾ APIs ಅನ್ನು ಬಳಸುವ ಮೂಲಕ, ನೀವು ಸಲ್ಲಿಸಿದ ಮಾಹಿತಿಯನ್ನು Reddit ತನ್ನ ಗೌಪ್ಯತಾ ನೀತಿಯ ಪ್ರಕಾರ ಬಳಸಬಹುದು.

2.7 ಕಾನೂನು ಪಾಲನೆ

ನಿಮಗೆ ಅನ್ವಯವಾಗುವ ಎಲ್ಲಾ ಕಾನೂನುಗಳು ಮತ್ತು ನಿಯಮಗಳನ್ನು ನೀವು ಪಾಲಿಸಬೇಕು. (ಇದರಲ್ಲಿ ಡೇಟಾ ಅಥವಾ ಸಾಫ್ಟ್‌ವೇರ್ ಆಮದು ಮತ್ತು ರಫ್ತು, ಗೌಪ್ಯತೆ ಹಾಗೂ ಸ್ಥಳೀಯ ಕಾನೂನುಗಳಿಗೆ ಸಂಬಂಧಿಸಿದ ಕಾನೂನುಗಳೂ ಸೇರಿವೆ).

2.8 ಅನುಮತಿಸಲಾದ ಪ್ರವೇಶ

ಡೇಟಾ APIs ಗೆ ಸಂಬಂಧಿಸಿದ ಡೆವಲಪರ್ ಡಾಕ್ಯುಮೆಂಟೇಷನ್ ನಲ್ಲಿ ವಿವರಿಸಿರುವ ಪ್ರವೇಶ ಮಾಹಿತಿಯನ್ನು ಬಳಸಿ ಮಾತ್ರವೇ ಡೇಟಾ APIs ಅನ್ನು ಪ್ರವೇಶಿಸಬೇಕು ಅಥವಾ (ಪ್ರವೇಶಿಸಲು ಪ್ರಯತ್ನಿಸಬೇಕು). ಡೇಟಾ APIs ಅನ್ನು ಪ್ರವೇಶಿಸುವಾಗ ನಾವು ನಿಮಗೆ ನೀಡಿರುವ ಪ್ರವೇಶ ಮಾಹಿತಿಯನ್ನು (ಉದಾಹರಣೆಗೆ, OAuth ಟೋಕನ್) ಅನ್ನು ಮಾತ್ರ ಬಳಸಬೇಕು. ಡೇಟಾ APIs ಬಳಸುವಾಗ ಬಳಕೆದಾರ ಏಜೆಂಟ್ ಅಥವಾ OAuth ಗುರುತನ್ನು ತಪ್ಪಾಗಿ ತೋರಿಸಬಾರದು ಅಥವಾ ಮರೆಮಾಡಬಾರದು.

2.9 API ಮಿತಿಗಳು

Reddit ತನ್ನ ಸ್ವಂತ ನಿರ್ಧಾರದಂತೆ, ನೀವು ಡೇಟಾ APIs ಅನ್ನು ಬಳಸುವ ಮೇಲೆ ಮಿತಿಗಳನ್ನು ವಿಧಿಸಬಹುದು ಮತ್ತು ಅವುಗಳನ್ನು ಜಾರಿಗೊಳಿಸಬಹುದು. (ಉದಾಹರಣೆಗೆ, ನೀವು ಮಾಡಬಹುದಾದ API ವಿನಂತಿಗಳ ಸಂಖ್ಯೆಯನ್ನು ಅಥವಾ ನೀವು ಸೇವೆ ನೀಡಬಹುದಾದ ಅಪ್ಲಿಕೇಶನ್ ಬಳಕೆದಾರರ ಸಂಖ್ಯೆಯನ್ನು ಮಿತಿಗೊಳಿಸಬಹುದು).

2.10 ಲೈಬ್ರರಿಗಳು, ರ್ಯಾಪರ್‌ಗಳು ಮತ್ತು ವಿಸ್ತರಣೆಗಳು

ನಮ್ಮ ಬಳಕೆದಾರರಿಗೆ Reddit ಅನ್ನು ತಲುಪಿಸಲು ಸಹಾಯ ಮಾಡುವ ಕೆಲವು ಉತ್ತಮ ಮೂರನೇ ವ್ಯಕ್ತಿಯ ಲೈಬ್ರರಿಗಳು, ರ್ಯಾಪರ್‌ಗಳು ಮತ್ತು ವಿಸ್ತರಣೆಗಳು ಇವೆ. ನಿಮ್ಮ ಅಪ್ಲಿಕೇಶನ್ ಇವುಗಳನ್ನು ಬಳಸುತ್ತಿದ್ದರೆ, ಸಂಬಂಧಿಸಿದ ಮೂರನೇ ವ್ಯಕ್ತಿ ಮತ್ತು Reddit ವಿಧಿಸಿರುವ ಯಾವುದೇ ಮಿತಿಗಳು ಅಥವಾ ನಿರ್ಬಂಧಗಳನ್ನು ನೀವು ಪಾಲಿಸಬೇಕು.

3. ಶುಲ್ಕಗಳು; ಬಳಕೆಯ ಮೇಲಿನ ನಿರ್ಬಂಧಗಳು

3.1 ಶುಲ್ಕಗಳು

ಮುಂದೆ ಡೇಟಾ APIs ಅನ್ನು ಬಳಸಲು ಅಥವಾ ಪ್ರವೇಶಿಸಲು Reddit ಶುಲ್ಕ ವಿಧಿಸುವ ಹಕ್ಕನ್ನು ಹೊಂದಿದೆ. ಆ ಶುಲ್ಕ ಎಷ್ಟು ಇರಬೇಕು ಎಂಬುದನ್ನು Reddit ತನ್ನ ಸ್ವಂತ ನಿರ್ಧಾರದಂತೆ ನಿಗದಿಪಡಿಸುತ್ತದೆ. ನೀವು ಡೇಟಾ APIs ಅನ್ನು ವಾಣಿಜ್ಯ ಉದ್ದೇಶಗಳಿಗಾಗಿ, ನಿಗದಿಪಡಿಸಿರುವ ದರದ ಮಿತಿಗಿಂತ ಹೆಚ್ಚಿನ ಪ್ರಮಾಣದ ಸಂಶೋಧನೆಗಾಗಿ ಅಥವಾ ಡೇಟಾ API ನಿಯಮಗಳಲ್ಲಿ ಸ್ಪಷ್ಟವಾಗಿ ಅನುಮತಿಸದ ಯಾವುದೇ ಉದ್ದೇಶಕ್ಕಾಗಿ ಬಳಸಲು ಬಯಸಿದರೆ, Reddit ಜೊತೆ ಪ್ರತ್ಯೇಕ ಒಪ್ಪಂದ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ, ನಮ್ಮ ಡೆವೆಲಪರ್ ಡಾಕ್ಯುಮೆಂಟೇಷನ್ ಅನ್ನು ಇಲ್ಲಿ ಪರಿಶೀಲಿಸಿ.

3.2 ನಿರ್ಬಂಧಗಳು

ನೀವು ಅಥವಾ ನಿಮ್ಮ ಪರವಾಗಿ ಕೆಲಸ ಮಾಡುವವರು ಈ ಕೆಳಗಿನ ಕೆಲಸಗಳನ್ನು ಮಾಡಬಾರದು ಅಥವಾ ಮಾಡಲು ಯಾರಿಗೂ ಅವಕಾಶ ಕೊಡಬಾರದು:

  • ಡೇಟಾ APIs ಬಳಸಿ ಕಾನೂನುಬಾಹಿರ ಚಟುವಟಿಕೆಗಳನ್ನು ಅಥವಾ ಇತರರ ಹಕ್ಕುಗಳನ್ನು ಉಲ್ಲಂಘಿಸುವ ಕೆಲಸಗಳನ್ನು ಪ್ರೋತ್ಸಾಹಿಸಬಾರದು ಅಥವಾ ಪ್ರಚಾರ ಮಾಡಬಾರದು. (ಇದರಲ್ಲಿ, ಸಂಬಂಧಿಸಿದ ಬಳಕೆದಾರರ ವಿಷಯದ ಹಕ್ಕುದಾರರ ಸ್ಪಷ್ಟ ಅನುಮತಿ ಇಲ್ಲದೆ, ಬಳಕೆದಾರರ ವಿಷಯವನ್ನು ಯಂತ್ರ ಕಲಿಕೆ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮಾದರಿಯನ್ನು ತರಬೇತಿ ಮಾಡಲು ಬಳಸುವುದೂ ಸೇರಿದೆ);

  • ಅನ್ವಯವಾಗುವ ಕಾನೂನು ಇದನ್ನು ಸ್ಪಷ್ಟವಾಗಿ ನಿಷೇಧಿಸದ ಹೊರತು, ಡೇಟಾ APIs ಅಥವಾ ಅದರ ಯಾವುದೇ ಭಾಗವನ್ನು ರಿವರ್ಸ್ ಎಂಜಿನಿಯರ್ ಮಾಡಬಾರದು, ಡಿಕಂಪೈಲ್ ಮಾಡಬಾರದು, ಡಿಸ್ಅಸೆಂಬಲ್ ಮಾಡಬಾರದು ಅಥವಾ ಅನುವಾದಿಸಬಾರದು. ಹಾಗೆಯೇ, ಡೇಟಾ APIs ನ ಮೂಲ ಕೋಡ್ ಅಥವಾ ಅದರ ಯಾವುದೇ ಭಾಗದ ಮೂಲ ಕೋಡ್ ಅನ್ನು ಬೇರೆ ರೀತಿಯಲ್ಲಿ ಪಡೆದುಕೊಳ್ಳಲು ಪ್ರಯತ್ನಿಸಬಾರದು;

  • ಡೆವಲಪರ್ ದಾಖಲಾತಿಯಲ್ಲಿ ತಿಳಿಸಿರುವ ಡೇಟಾ APIs ಬಳಕೆಯ ಮಿತಿಗಳನ್ನು ಅಥವಾ ಕರೆಗಳ ಮಿತಿಗಳನ್ನು ತಪ್ಪಿಸಿಕೊಳ್ಳಬಾರದು ಅಥವಾ ಮೀರಬಾರದು. ಡೇಟಾ APIs ಅನ್ನು ಅತಿಯಾಗಿ ಅಥವಾ ದುರುಪಯೋಗಪಡಿಸಿಕೊಂಡು ಬಳಸಬಾರದು. ಹಾಗೆಯೇ, ಡೇಟಾ APIs ಅಥವಾ ಅವುಗಳನ್ನು ಒದಗಿಸುವ ಸರ್ವರ್‌ಗಳು ಅಥವಾ ನೆಟ್‌ವರ್ಕ್‌ಗಳಿಗೆ ತೊಂದರೆ ಉಂಟುಮಾಡುವ ಅಥವಾ ಅವುಗಳ ಕೆಲಸಕ್ಕೆ ಅನಗತ್ಯವಾಗಿ ಅಡ್ಡಿಪಡಿಸುವ ರೀತಿಯಲ್ಲಿ ಡೇಟಾ APIs ಅನ್ನು ಬಳಸಬಾರದು. (ಈ ನಿಯಮವನ್ನು ನೀವು ಉಲ್ಲಂಘಿಸಿದ್ದೀರಿ ಎಂದು Reddit ಭಾವಿಸಿದರೆ, ಡೇಟಾ APIs ಗೆ ನಿಮ್ಮ ಪ್ರವೇಶವನ್ನು ಶಾಶ್ವತವಾಗಿ ಬ್ಲಾಕ್ ಮಾಡುವ ಹಕ್ಕು Reddit ಗೆ ಇರುತ್ತದೆ);

  • ಡೇಟಾ APIs ನ ಯಾವುದೇ ಫೀಚರ್‌ಗಳು ಅಥವಾ ಕಾರ್ಯಗಳನ್ನು ಅಡ್ಡಿಪಡಿಸಬಾರದು, ಬದಲಾಯಿಸಬಾರದು, ನಿಲ್ಲಿಸಬಾರದು ಅಥವಾ ನಿಷ್ಕ್ರಿಯಗೊಳಿಸಬಾರದು. ಕಾರ್ಯಗಳನ್ನು ನಿರ್ಬಂಧಿಸಲು ಅಥವಾ ನಿಯಂತ್ರಿಸಲು ಬಳಸುವ ಯಾವುದೇ ವ್ಯವಸ್ಥೆಯಲ್ಲೂ ಹಸ್ತಕ್ಷೇಪ ಮಾಡಬಾರದು. ಹಾಗೆಯೇ, ಡೇಟಾ APIs ನ ಸಾಫ್ಟ್‌ವೇರ್ ರಕ್ಷಣೆ ಅಥವಾ ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಸೋಲಿಸಬಾರದು, ತಪ್ಪಿಸಿಕೊಳ್ಳಬಾರದು, ಬದಿಗೊತ್ತಬಾರದು, ತೆಗೆದುಹಾಕಬಾರದು, ನಿಷ್ಕ್ರಿಯಗೊಳಿಸಬಾರದು ಅಥವಾ ಬೇರೆ ರೀತಿಯಲ್ಲಿ ತಪ್ಪಿಸಲು ಪ್ರಯತ್ನಿಸಬಾರದು;

  • ವೈರಸ್, ವರ್ಮ್, ದೋಷಗಳು, ಟ್ರೋಜನ್ ಹಾರ್ಸ್, ಮಾಲ್‌ವೇರ್ ಅಥವಾ ಹಾನಿ ಉಂಟುಮಾಡುವ ಇತರ ಯಾವುದೇ ವಸ್ತುಗಳನ್ನು ಪರಿಚಯಿಸುವ ಉದ್ದೇಶದಿಂದ ಡೇಟಾ APIs ಅನ್ನು ಬಳಸಬಾರದು;

  • Reddit ನ ಲಿಖಿತ ಅನುಮತಿ ಇಲ್ಲದೆ, ಡೇಟಾ APIs ಅನ್ನು ಅಥವಾ ಅವುಗಳಿಗೆ ಪ್ರವೇಶವನ್ನು ಮಾರಾಟ ಮಾಡಬಾರದು, ಬಾಡಿಗೆಗೆ ನೀಡಬಾರದು ಅಥವಾ ಉಪ ಲೈಸೆನ್ಸ್ ಮಾಡಬಾರದು. ಹಾಗೆಯೇ, ನೇರವಾಗಿ ವ್ಯಾಪಾರಿಕ ಅಥವಾ ಹಣಕಾಸಿನ ಲಾಭ ಪಡೆಯಲು ಡೇಟಾ APIs ಅನ್ನು ಬಳಸುವುದರಿಂದ ಅಥವಾ ಅವುಗಳನ್ನು ಒದಗಿಸುವುದರಿಂದ ಆದಾಯ ಗಳಿಸಬಾರದು;

  • ಡೇಟಾ APIs ಮೂಲಕ ಪಡೆದ ಯಾವುದೇ ಬಳಕೆದಾರರ ವಿಷಯ, ಸಾಮಗ್ರಿಗಳು ಅಥವಾ ಮಾಹಿತಿಯನ್ನು ನಿಮಗೆ ಅನುಮತಿಸಿರುವ ಬಳಕೆಯ ಉದ್ದೇಶಕ್ಕಿಂತ ಬೇರೆ ಯಾವುದೇ ಉದ್ದೇಶಕ್ಕೆ ಬಳಸಬಾರದು ಅಥವಾ ಉಳಿಸಿಕೊಳ್ಳಬಾರದು. ಆ ಉದ್ದೇಶಕ್ಕೆ ಅಗತ್ಯವಿಲ್ಲದ ಯಾವುದೇ ಮಾಹಿತಿಯನ್ನು ತಕ್ಷಣವೇ ಅಳಿಸಬೇಕು; ಅಥವಾ
  • ಡೇಟಾ APIs ಅನ್ನು ಬಳಸಿ ಬಳಕೆದಾರರಿಗೆ ಸ್ಪ್ಯಾಮ್ ಮಾಡಬಾರದು, ಯಾವುದೇ ಪ್ರಲೋಭನೆ ನೀಡಬಾರದು ಅಥವಾ ಕಿರುಕುಳ ನೀಡಬಾರದು.

4. ಟ್ರೇಡ್‌ಮಾರ್ಕ್‌ಗಳು; ಮೂಲದ ಉಲ್ಲೇಖ; ಪ್ರಚಾರ

4.1 Reddit ಟ್ರೇಡ್‌ಮಾರ್ಕ್‌ಗಳ ಬಳಕೆ

Redditನ ಲಿಖಿತ ಅನುಮತಿ ಇಲ್ಲದೆ ಅಥವಾ ಡೇಟಾ API ನಿಯಮಗಳಲ್ಲಿ ಅನುಮತಿ ನೀಡಿರದಿದ್ದರೆ, ನಿಮ್ಮ ಆಪ್‌ನ ಹೆಸರು ಅಥವಾ ನಿಮ್ಮ ಆಪ್ ಅನ್ನು ಪ್ರಚಾರ ಮಾಡಲು ಅಥವಾ ಗುರುತಿಸಲು ಬಳಸುವ ಯಾವುದೇ ಲೋಗೋದಲ್ಲಿ Reddit ಟ್ರೇಡ್‌ಮಾರ್ಕ್‌ಗಳನ್ನು ಬಳಸಬಾರದು. ಇದಲ್ಲದೆ, ನೀವು ಈ ಕೆಳಗಿನ ನಿಯಮಗಳನ್ನು ಪಾಲಿಸಲು ಒಪ್ಪುತ್ತೀರಿ:(a) ನಿಮ್ಮ ಆಪ್‌ಗೆ Reddit ಬೆಂಬಲ, ಸಂಬಂಧ ಅಥವಾ ಪ್ರಾಯೋಜಕತ್ವ ಇದೆ ಎಂದು ಜನರಿಗೆ ಅನಿಸುವಂತೆ ಮಾಡುವ ರೀತಿಯಲ್ಲಿ Reddit ಟ್ರೇಡ್‌ಮಾರ್ಕ್‌ಗಳನ್ನು ಬದಲಾಯಿಸಿ ಅಥವಾ ಅವುಗಳನ್ನು ಆಧರಿಸಿ ಹೊಸ ಗುರುತುಗಳನ್ನು ರಚಿಸಬಾರದು.(b) ಬಳಕೆದಾರರನ್ನು ತಪ್ಪುದಾರಿಗೆಳೆಯುವ, ಮೋಸಗೊಳಿಸುವ ಅಥವಾ ಗೊಂದಲಕ್ಕೀಡುಮಾಡುವ ರೀತಿಯಲ್ಲಿ Reddit ಟ್ರೇಡ್‌ಮಾರ್ಕ್‌ಗಳನ್ನು ಬಳಸಬಾರದು. Reddit ಟ್ರೇಡ್‌ಮಾರ್ಕ್‌ಗಳಿಗೆ ತುಂಬಾ ಹೋಲುವ ಯಾವುದೇ ಗುರುತನ್ನು ಬಳಸುವುದು ಅಥವಾ ನೋಂದಾಯಿಸುವುದೂ ಇದರಲ್ಲಿ ಸೇರಿದೆ. (c) Reddit ಟ್ರೇಡ್‌ಮಾರ್ಕ್‌ಗಳ ಮೇಲಿನ Redditನ ಮಾಲೀಕತ್ವವನ್ನು ಪ್ರಶ್ನಿಸಬಾರದು. ಈ ಮಾಲೀಕತ್ವಕ್ಕೆ ವಿರುದ್ಧವಾದ ಯಾವುದೇ ಕ್ರಮವನ್ನು ತೆಗೆದುಕೊಳ್ಳಬಾರದು. Reddit ಟ್ರೇಡ್‌ಮಾರ್ಕ್‌ಗಳ ಮೇಲಿನ Redditನ ವಿಶೇಷ ಹಕ್ಕುಗಳನ್ನು ಸ್ಥಾಪಿಸಲು ಅಥವಾ ಉಳಿಸಿಕೊಳ್ಳಲು Redditಗೆ ಅಗತ್ಯ ಅಥವಾ ಸೂಕ್ತವೆಂದು ಅನಿಸಿದ ಯಾವುದೇ ಕ್ರಮಕ್ಕೆ, (ಕಾನೂನು ಕ್ರಮಗಳನ್ನು ಕೈಗೊಳ್ಳುವುದೂ ಸೇರಿದಂತೆ), Reddit ಕೇಳಿದಾಗ ಮತ್ತು Reddit ನ ವೆಚ್ಚದಲ್ಲಿ ಸಹಕರಿಸಬೇಕು. Reddit ಟ್ರೇಡ್‌ಮಾರ್ಕ್‌ಗಳನ್ನು ನೀವು ಬಳಸುವುದರಿಂದ ಉಂಟಾಗುವ ಎಲ್ಲಾ ಬಳಕೆ ಮತ್ತು ಅದರಿಂದ ಸಿಗುವ ಒಳ್ಳೆಯ ಹೆಸರು ಅಥವಾ ಖ್ಯಾತಿಯ ಲಾಭ Reddit ಗೆ ಸೇರಿರುತ್ತದೆ.

4.2 ಮೂಲದ ಉಲ್ಲೇಖ

ಡೇಟಾ APIsಗೆ ಸಂಬಂಧಿಸಿದಂತೆ, ಡೆವಲಪರ್ ದಾಖಲಾತಿಯಲ್ಲಿ Reddit ತಿಳಿಸಿರುವ ಅಗತ್ಯವಾದ ಮೂಲದ ಉಲ್ಲೇಖ(ಗಳನ್ನು) ನೀವು ತೋರಿಸಬೇಕು ಎಂದು ಒಪ್ಪುತ್ತೀರಿ. ನೀವು ಡೇಟಾ APIs ಬಳಸುವಾಗ, ಡೇಟಾ API ನಿಯಮಗಳು ಜಾರಿಯಲ್ಲಿರುವವರೆಗೆ “Reddit” ಹೆಸರಿನ ಗುರುತನ್ನು ಬಳಸಲು ಅಥವಾ ತೋರಿಸಲು Reddit ನಿಮಗೆ ವರ್ಗಾಯಿಸಲಾಗದ, ಇತರರಿಗೆ ನೀಡಲಾಗದ ಮತ್ತು ವಿಶೇಷ ಹಕ್ಕು ನೀಡದ ಅನುಮತಿಯನ್ನು ನೀಡುತ್ತದೆ. ಆದರೆ, “Reddit” ಅನ್ನು ಬಳಸುವಾಗ ಅದರ ಮೊದಲು “for” ಎಂಬ ಪದವನ್ನು ಬಳಸಬೇಕು. (ಉದಾಹರಣೆಗೆ, “[ಹೆಸರನ್ನು ಇಲ್ಲಿ ಸೇರಿಸಿ] for Reddit”).

4.3 ಪ್ರಚಾರ

Reddit ನ ಮುಂಚಿತ ಲಿಖಿತ ಅನುಮತಿ ಇಲ್ಲದೆ, ನೀವು ಡೇಟಾ APIs ಬಳಸುತ್ತಿರುವುದು Reddit ನೊಂದಿಗೆ ಪಾಲುದಾರಿಕೆ, ಪ್ರಾಯೋಜಕತ್ವ ಅಥವಾ Reddit ನ ಬೆಂಬಲ ಇದೆ ಎಂಬಂತೆ ತೋರಿಸುವ ಯಾವುದೇ ಹೇಳಿಕೆ ನೀಡಬಾರದು.

5. ಸಹಾಯ; ಬದಲಾವಣೆಗಳು; ಅಭಿಪ್ರಾಯ

5.1 ಬೆಂಬಲ

Reddit ತನ್ನ ಸ್ವಂತ ನಿರ್ಧಾರದಂತೆ, ಡೇಟಾ APIs ಗೆ ನಿಮಗೆ ಸಹಾಯ ಅಥವಾ ಬದಲಾವಣೆಗಳನ್ನು ನೀಡಬಹುದು. ನಿಮಗೆ ಯಾವುದೇ ಮುಂಚಿತ ಮಾಹಿತಿ ನೀಡದೆ, ಈ ಸಹಾಯವನ್ನು ಯಾವಾಗ ಬೇಕಾದರೂ ನಿಲ್ಲಿಸಬಹುದು.

5.2 ಡೇಟಾ APIs ನಲ್ಲಿ ಬದಲಾವಣೆಗಳು

Reddit ಯಾವುದೇ ಸಮಯದಲ್ಲಿ ಡೇಟಾ APIs ನ ಯಾವುದೇ ಭಾಗವನ್ನು ಬದಲಾಯಿಸಬಹುದು, ಅಮಾನತುಗೊಳಿಸಬಹುದು ಅಥವಾ ಸಂಪೂರ್ಣವಾಗಿ ನಿಲ್ಲಿಸಬಹುದು. ಇದರಲ್ಲಿ ಡೇಟಾ APIs ನ ಸಂಪೂರ್ಣ ಅಥವಾ ಯಾವುದೇ ಭಾಗದ ಲಭ್ಯತೆಯನ್ನು ಬದಲಾಯಿಸುವುದು, ನಿಲ್ಲಿಸುವುದು ಅಥವಾ ತೆಗೆದುಹಾಕುವುದೂ ಸೇರಿದೆ.

5.3 ಸಲಹೆಗಳು

ಡೇಟಾ APIs ಬಗ್ಗೆ ನೀವು ನೀಡುವ ಯಾವುದೇ ಸಲಹೆಗಳನ್ನು Reddit ಯಾವುದೇ ನಿರ್ಬಂಧ, ಹೊಣೆಗಾರಿಕೆ ಅಥವಾ ನಿಮಗೆ ಯಾವುದೇ ಹಣ ನೀಡುವ ಅಗತ್ಯವಿಲ್ಲದೆ, ತನ್ನ ಯಾವುದೇ ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಬಳಸಬಹುದು, ಬದಲಾಯಿಸಬಹುದು ಮತ್ತು ಸೇರಿಸಿಕೊಳ್ಳಬಹುದು ಎಂಬುದನ್ನು ನೀವು ಒಪ್ಪುತ್ತೀರಿ ಮತ್ತು ತಿಳಿದುಕೊಂಡಿದ್ದೀರಿ.

6. ಮುಕ್ತಾಯ

ನೀವು Reddit ಗೆ ತಿಳಿಸದೆ ಅಥವಾ ತಿಳಿಸಿ, ಯಾವುದೇ ಸಮಯದಲ್ಲಿ ಡೇಟಾ APIs ಬಳಕೆಯನ್ನು ನಿಲ್ಲಿಸಬಹುದು. ಯಾವುದೇ ಕಾರಣಕ್ಕಾಗಿ ಮತ್ತು ಯಾವುದೇ ಅವಧಿಗೆ, ನಿಮಗೆ ಮುಂಚಿತವಾಗಿ ತಿಳಿಸದೆ, ಡೇಟಾ APIsಗೆ ನಿಮ್ಮ ಪ್ರವೇಶವನ್ನು ರದ್ದುಪಡಿಸುವ ಹಕ್ಕು Reddit ಗೆ ಇದೆ. ಡೇಟಾ API ನಿಯಮಗಳು ಕೊನೆಗೊಂಡಾಗ ಅಥವಾ ಡೇಟಾ APIs ಗೆ ನಿಮ್ಮ ಪ್ರವೇಶವನ್ನು ನಿಲ್ಲಿಸಿದಾಗ, ನೀವು ತಕ್ಷಣವೇ ಡೇಟಾ APIs ನ ಬಳಕೆಯನ್ನು ನಿಲ್ಲಿಸಬೇಕು. ಡೇಟಾ APIs ನ ಮೂಲಕ ಬಳಸಲು ಅನುಮತಿಸಲಾದ ಅಥವಾ ಪಡೆದಿರುವ ಸಂಗ್ರಹಿಸಿದ ಬಳಕೆದಾರರ ವಿಷಯ ಮತ್ತು ಸಾಮಗ್ರಿಗಳನ್ನು ಅಳಿಸಬೇಕು. ಸಾಧ್ಯವಾದಷ್ಟು, ಮೊಬೈಲ್ ಆಪ್‌ಗಳ ಮುಂದಿನ ವಿತರಣೆ ಅಥವಾ ನವೀಕರಣವನ್ನೂ ನಿಲ್ಲಿಸಬೇಕು (ಅನ್ವಯವಾಗುವಂತೆ). ಡೇಟಾ APIs ಅಥವಾ ನಮ್ಮ ಇತರ ಸೇವೆಗಳ ಮೂಲಕ ಪಡೆದ ಬಳಕೆದಾರರ ವಿಷಯ ಮತ್ತು ಸಾಮಗ್ರಿಗಳಿಂದ ಸಿದ್ಧಪಡಿಸಿದ ಯಾವುದೇ ಮಾಹಿತಿ ಅಥವಾ ಮಾದರಿಗಳನ್ನೂ ಇದರಲ್ಲಿ ಸೇರಿಸಲಾಗಿದೆ.

7. ಹೊಣೆಗಾರಿಕೆ ನಿರಾಕರಣೆ; ಹೊಣೆಗಾರಿಕೆಯ ಮಿತಿ; ನಷ್ಟಪೂರೈಕೆ

7.1 ಹೊಣೆಗಾರಿಕೆ ನಿರಾಕರಣೆ

Reddit ನೀಡುವ ಯಾವುದೇ ಡೇಟಾ APIs ನಲ್ಲಿ ತಪ್ಪುಗಳು, ದೋಷಗಳು, ತಾಂತ್ರಿಕ ಸಮಸ್ಯೆಗಳು ಅಥವಾ ಅಡಚಣೆಗಳು ಇರುವುದಿಲ್ಲ ಎಂದು Reddit ಖಚಿತಪಡಿಸುವುದಿಲ್ಲ. ಹಾಗೆಯೇ, ಅವು ವಿಶ್ವಾಸಾರ್ಹ, ನಿಖರ, ಸಂಪೂರ್ಣ ಅಥವಾ ಸರಿಯಾಗಿವೆ ಎಂದೂ Reddit ಖಾತರಿ ನೀಡುವುದಿಲ್ಲ. ಡೇಟಾ APIs ಅನ್ನು ಯಾವುದೇ ರೀತಿಯ ಖಾತರಿ ಇಲ್ಲದೆ, ಇರುವ ಸ್ಥಿತಿಯಲ್ಲಿಯೇ ನೀಡಲಾಗುತ್ತದೆ. ಸ್ಪಷ್ಟವಾಗಿ ನೀಡಿರುವ ಅಥವಾ ಅರ್ಥದಿಂದ ಅನ್ವಯವಾಗುವ ಯಾವುದೇ ಖಾತರಿಯನ್ನು Reddit ಒಪ್ಪುವುದಿಲ್ಲ. ಇದರಲ್ಲಿ ಮಾರಾಟಕ್ಕೆ ಯೋಗ್ಯವಾಗಿರುವುದು, ನಿರ್ದಿಷ್ಟ ಉದ್ದೇಶಕ್ಕೆ ಸೂಕ್ತವಾಗಿರುವುದು, ಲಭ್ಯವಿರುವುದು, ಸುರಕ್ಷಿತವಾಗಿರುವುದು, ಮಾಲೀಕತ್ವ ಹೊಂದಿರುವುದು ಮತ್ತು ಇತರರ ಹಕ್ಕುಗಳನ್ನು ಉಲ್ಲಂಘಿಸದಿರುವುದಕ್ಕೆ ಸಂಬಂಧಿಸಿದ ಖಾತರಿಗಳೂ ಸೇರಿವೆ. ಡೇಟಾ APIs ಅನ್ನು ಬಳಸುವುದೇ ಅಥವಾ ಬೇಡವೇ ಎಂಬುದು ನಿಮ್ಮ ಸ್ವಂತ ನಿರ್ಧಾರ ಮತ್ತು ಅಪಾಯಕ್ಕೆ ಒಳಪಟ್ಟದ್ದು. ಡೇಟಾ APIs ಬಳಸುವುದರಿಂದ ಉಂಟಾಗುವ ಯಾವುದೇ ಹಾನಿಗೆ ನೀವೇ ಸಂಪೂರ್ಣ ಹೊಣೆಗಾರರು. ಇದರಲ್ಲಿ ನಿಮ್ಮ ಕಂಪ್ಯೂಟರ್‌ಗೆ ಆಗುವ ಹಾನಿ ಅಥವಾ ಡೇಟಾ ಕಳೆದುಹೋಗುವುದೂ ಸೇರಿದೆ.

7.2 ಹೊಣೆಗಾರಿಕೆಯ ಮಿತಿ

Data APIs ಬಳಕೆಯಿಂದ ಅಥವಾ ಅದಕ್ಕೆ ಸಂಬಂಧಿಸಿದಂತೆ ಉಂಟಾಗುವ ಯಾವುದೇ ನೇರ, ಪರೋಕ್ಷ, ಆಕಸ್ಮಿಕ, ಪರಿಣಾಮಕಾರಿ, ವಿಶೇಷ ಅಥವಾ ಹೆಚ್ಚುವರಿ ಹಾನಿಗಳಿಗೆ Reddit ನಿಮಗೆ ಹೊಣೆಗಾರನಾಗಿರುವುದಿಲ್ಲ. ಈ ಹಾನಿಗಳು ನಿರ್ಲಕ್ಷ್ಯ ಸೇರಿದಂತೆ ಯಾವುದೇ ತಪ್ಪು, ಒಪ್ಪಂದ ಉಲ್ಲಂಘನೆ, (ಖಾತರಿ ಉಲ್ಲಂಘನೆ ಅಥವಾ ಬೇರೆ) ಯಾವುದೇ ಹಣಕಾಸಿನ ನಷ್ಟದಿಂದ ಉಂಟಾದರೂ ಇದೇ ನಿಯಮ ಅನ್ವಯಿಸುತ್ತದೆ. ಅಂತಹ ಹಾನಿ ಉಂಟಾಗುವ ಸಾಧ್ಯತೆ ಇದೆ ಎಂದು Reddit ಗೆ ಮೊದಲೇ ತಿಳಿಸಿದ್ದರೂ ಸಹ, Reddit ಹೊಣೆಗಾರನಾಗಿರುವುದಿಲ್ಲ. ಯಾವುದೇ ಸಂದರ್ಭದಲ್ಲೂ Reddit ನಿಮಗೆ $100 ಗಿಂತ ಹೆಚ್ಚು ಹಣಕ್ಕೆ ಹೊಣೆಗಾರನಾಗಿರುವುದಿಲ್ಲ.

7.3 ನಷ್ಟ ಪರಿಹಾರ

ಅನ್ವಯವಾಗುವ ಕಾನೂನು ಅನುಮತಿಸುವ ಗರಿಷ್ಠ ಮಟ್ಟದವರೆಗೆ, ಡೇಟಾ APIs ಅನ್ನು ನೀವು ಬಳಸುವುದರಿಂದ ಉಂಟಾಗುವ ಅಥವಾ ಯಾವುದೇ ರೀತಿಯಲ್ಲಿ ಅದಕ್ಕೆ ಸಂಬಂಧಿಸಿದ ಮೂರನೇ ವ್ಯಕ್ತಿಯ ಯಾವುದೇ ದಾವೆಗಳಿಂದ Reddit ಮತ್ತು ಅದರ ಅಂಗ ಸಂಸ್ಥೆಗಳು, ಸಂಬಂಧಿತ ಸಂಸ್ಥೆಗಳು, ಅಧಿಕಾರಿಗಳು, ಪ್ರತಿನಿಧಿಗಳು, ಪರವಾನಗಿ ನೀಡಿದವರು ಮತ್ತು ಉದ್ಯೋಗಿಗಳಿಗೆ ಯಾವುದೇ ಹಾನಿ ಅಥವಾ ಹೊಣೆಗಾರಿಕೆ ಉಂಟಾಗದಂತೆ ನೋಡಿಕೊಳ್ಳಲು ಮತ್ತು ನಷ್ಟ ಪರಿಹಾರ ನೀಡಲು ನೀವು ಒಪ್ಪುತ್ತೀರಿ. ಇದರಲ್ಲಿ ಯಾವುದೇ ರೀತಿಯ ಮತ್ತು ಯಾವುದೇ ಸ್ವರೂಪದ ದಾವೆಗಳು, ನಷ್ಟಗಳು (ನೇರ ಮತ್ತು/ಅಥವಾ ಪರಿಣಾಮವಾಗಿ ಉಂಟಾಗುವ), ಹಾನಿಗಳು, ಮೊಕದ್ದಮೆಗಳು, ನ್ಯಾಯಾಲಯದ ತೀರ್ಪುಗಳಿಂದ ಉಂಟಾಗುವ ಹೊಣೆಗಾರಿಕೆಗಳು, ಪ್ರಕರಣದ ಖರ್ಚುಗಳು ಮತ್ತು ವಕೀಲರ ಶುಲ್ಕಗಳು ಸೇರಿವೆ. ಅಂತಹ ದಾವೆ, ಮೊಕದ್ದಮೆ ಅಥವಾ ಕಾನೂನು ಕ್ರಮದ ಬಗ್ಗೆ ನಿಮಗೆ ಲಿಖಿತವಾಗಿ ಮಾಹಿತಿ ನೀಡಲು Reddit ಪ್ರಾಮಾಣಿಕವಾಗಿ ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ.

8. ಇತರೆ ವಿಷಯಗಳು

8.1 ಗೌಪ್ಯತೆ

ನಾವು ನಿಮಗೆ ಕಳುಹಿಸುವ ಮಾಹಿತಿ ಮತ್ತು ನಮ್ಮ ಡೇಟಾ ವ್ಯವಸ್ಥೆಗಳಲ್ಲಿ Reddit ನ ಗೌಪ್ಯ ಮಾಹಿತಿಯೂ ಇರಬಹುದು. Reddit ನ ಗೌಪ್ಯ ಮಾಹಿತಿ ಎಂದರೆ, ಗೌಪ್ಯ ಎಂದು ಗುರುತಿಸಿರುವ ಯಾವುದೇ ವಿಷಯ, ಸಂದೇಶ ಅಥವಾ ಮಾಹಿತಿ. ಸಾಮಾನ್ಯವಾಗಿ ನೋಡಿದಾಗ ಗೌಪ್ಯವೆಂದು ಪರಿಗಣಿಸುವ ಮಾಹಿತಿಯೂ ಇದರಲ್ಲಿ ಸೇರಿದೆ. ಡೇಟಾ API ನಿಯಮಗಳ ಅಡಿಯಲ್ಲಿ ನಿಮಗೆ ನೀಡಿರುವ ಹಕ್ಕುಗಳನ್ನು ಬಳಸಲು ಅಗತ್ಯವಿರುವಷ್ಟರ ಮಟ್ಟಿಗೆ ಮಾತ್ರ ಈ ಗೌಪ್ಯ ಮಾಹಿತಿಯನ್ನು ಬಳಸಬಹುದು. Reddit ನ ಮುಂಚಿತ ಲಿಖಿತ ಅನುಮತಿ ಇಲ್ಲದೆ ಈ ಮಾಹಿತಿಯನ್ನು ಬೇರೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಹಂಚಿಕೊಳ್ಳಬಾರದು. ನಿಮ್ಮ ಸ್ವಂತ ಗೌಪ್ಯ ಮತ್ತು ಖಾಸಗಿ ಮಾಹಿತಿಯನ್ನು ಹೇಗೆ ಸುರಕ್ಷಿತವಾಗಿ ಕಾಪಾಡುತ್ತೀರೋ, ಅದೇ ರೀತಿಯಲ್ಲಿ ಈ ಗೌಪ್ಯ ಮಾಹಿತಿಯನ್ನೂ ಅನುಮತಿಯಿಲ್ಲದ ಬಳಕೆ, ಪ್ರವೇಶ ಅಥವಾ ಬಹಿರಂಗಪಡಿಸುವಿಕೆಯಿಂದ ಕಾಪಾಡಲು ನೀವು ಒಪ್ಪುತ್ತೀರಿ. ಯಾವುದೇ ಸಂದರ್ಭದಲ್ಲೂ ಈ ಮಾಹಿತಿಯನ್ನು ಕಾಪಾಡುವಲ್ಲಿ ಸಮಂಜಸವಾದ ಎಚ್ಚರಿಕೆಯನ್ನು ಕಡಿಮೆ ಮಾಡಬಾರದು. Reddit ನ ಗೌಪ್ಯ ಮಾಹಿತಿಯಲ್ಲಿ, ನೀವು ಸ್ವತಂತ್ರವಾಗಿ ಅಭಿವೃದ್ಧಿಪಡಿಸಿದ ಮಾಹಿತಿ, ಗೌಪ್ಯವಾಗಿಡುವ ಯಾವುದೇ ಹೊಣೆಗಾರಿಕೆ ಇಲ್ಲದೆ ಮೂರನೇ ವ್ಯಕ್ತಿಯು ನಿಮಗೆ ಸರಿಯಾಗಿ ನೀಡಿದ ಮಾಹಿತಿ ಅಥವಾ ನಿಮ್ಮ ಯಾವುದೇ ತಪ್ಪಿಲ್ಲದೆ ಸಾರ್ವಜನಿಕವಾಗಿರುವ ಮಾಹಿತಿ ಸೇರಿರುವುದಿಲ್ಲ. ಕಾನೂನಿನ ಪ್ರಕಾರ ಕಡ್ಡಾಯವಾದರೆ, Reddit ನ ಗೌಪ್ಯ ಮಾಹಿತಿಯನ್ನು ಬಹಿರಂಗಪಡಿಸಬಹುದು. ಆದರೆ ಅದಕ್ಕೂ ಮೊದಲು ನಮಗೆ ಸಮಂಜಸವಾದ ಮುಂಚಿತ ಮಾಹಿತಿ ನೀಡಬೇಕು. ನ್ಯಾಯಾಲಯವು ನಮಗೆ ಈ ಬಗ್ಗೆ ಮಾಹಿತಿ ನೀಡಬಾರದು ಎಂದು ಆದೇಶಿಸಿದರೆ ಮಾತ್ರ ಮುಂಚಿತ ಮಾಹಿತಿ ನೀಡಬೇಕಾಗಿಲ್ಲ.

8.2 ಡೇಟಾ API ನಿಯಮಗಳಲ್ಲಿ ಬದಲಾವಣೆಗಳು

Reddit ಯಾವುದೇ ಸಮಯದಲ್ಲಿ ಡೇಟಾ API ನಿಯಮಗಳಲ್ಲಿ ಬದಲಾವಣೆ ಮಾಡಬಹುದು. ನೀವು ಡೇಟಾ API ನಿಯಮಗಳನ್ನು ನಿಯಮಿತವಾಗಿ ಪರಿಶೀಲಿಸುತ್ತಿರಬೇಕು. ನಾವು ಡೇಟಾ API ನಿಯಮಗಳಲ್ಲಿ ಬದಲಾವಣೆ ಮಾಡಿದರೆ, ಬದಲಾಯಿಸಿದ ಡೇಟಾ API ನಿಯಮಗಳನ್ನು ಪೋಸ್ಟ್ ಮಾಡುತ್ತೇವೆ. ಡೇಟಾ API ನಿಯಮಗಳಲ್ಲಿ ಮಾಡಿದ ಬದಲಾವಣೆಗಳು ಅಥವಾ ಪರಿಷ್ಕರಣೆಗಳು ಜಾರಿಗೆ ಬಂದ ನಂತರವೂ ನೀವು ಡೇಟಾ APIs ಅನ್ನು ಬಳಸಿದರೆ ಅಥವಾ ಪ್ರವೇಶಿಸಿದರೆ, ಆ ಬದಲಾಯಿಸಿದ ಅಥವಾ ಪರಿಷ್ಕರಿಸಿದ ಡೇಟಾ API ನಿಯಮಗಳನ್ನು ಪಾಲಿಸಲು ನೀವು ಒಪ್ಪಿಕೊಂಡಂತೆ ಆಗುತ್ತದೆ.

8.3 ಸಾಮಾನ್ಯ ನಿಯಮಗಳು

ಡೇಟಾ API ನಿಯಮಗಳಿಂದ ಎರಡೂ ಪಕ್ಷಗಳ ನಡುವೆ ಯಾವುದೇ ಪ್ರತಿನಿಧಿ ಸಂಬಂಧ, ಪಾಲುದಾರಿಕೆ ಅಥವಾ ಜಂಟಿ ಉದ್ಯಮ ಉಂಟಾಗುವುದಿಲ್ಲ. ಡೇಟಾ API ನಿಯಮಗಳಲ್ಲಿರುವ ಯಾವುದೇ ವಿಷಯವು, ಯಾವುದೇ ಪಕ್ಷವು ನ್ಯಾಯಾಲಯದಿಂದ ತಡೆಯಾಜ್ಞೆ ಪಡೆಯಲು ಇರುವ ಹಕ್ಕನ್ನು ನಿರ್ಬಂಧಿಸುವುದಿಲ್ಲ. ನಮ್ಮ ಸಮಂಜಸವಾದ ನಿಯಂತ್ರಣಕ್ಕೆ ಮೀರಿದ ಪರಿಸ್ಥಿತಿಗಳಿಂದ ಕೆಲಸ ಮಾಡಲು ವಿಳಂಬವಾದರೆ ಅಥವಾ ಕೆಲಸ ಮಾಡಲು ಸಾಧ್ಯವಾಗದಿದ್ದರೆ, ಅದಕ್ಕೆ Reddit ಹೊಣೆಗಾರನಾಗಿರುವುದಿಲ್ಲ. ಡೇಟಾ API ನಿಯಮಗಳಲ್ಲಿರುವ ಯಾವುದೇ ನಿಯಮವನ್ನು ಜಾರಿಗೊಳಿಸದಿದ್ದರೂ, ಆ ನಿಯಮವನ್ನು ಅಥವಾ ಬೇರೆ ಯಾವುದೇ ನಿಯಮವನ್ನು ಮುಂದೆ ಜಾರಿಗೊಳಿಸುವ ಹಕ್ಕನ್ನು ಬಿಟ್ಟುಕೊಟ್ಟಂತೆ ಆಗುವುದಿಲ್ಲ. ಡೇಟಾ API ನಿಯಮಗಳಲ್ಲಿರುವ ಯಾವುದೇ ವಿಭಾಗ ಅಥವಾ (ಅದರ ಯಾವುದಾದರೂ ಭಾಗವು) ಅಮಾನ್ಯ, ಕಾನೂನುಬಾಹಿರ ಅಥವಾ ಜಾರಿಗೊಳಿಸಲು ಸಾಧ್ಯವಾಗದಿದ್ದರೂ, ಉಳಿದ ಡೇಟಾ API ನಿಯಮಗಳು ಜಾರಿಯಲ್ಲಿ ಇರುತ್ತವೆ. ಡೇಟಾ API ನಿಯಮಗಳಿಗೆ ಕ್ಯಾಲಿಫೋರ್ನಿಯಾ ರಾಜ್ಯದ ಕಾನೂನುಗಳು ಅನ್ವಯಿಸುತ್ತವೆ. ಆದರೆ, ಬೇರೆ ಬೇರೆ ರಾಜ್ಯಗಳ ಕಾನೂನುಗಳ ನಡುವಿನ ವ್ಯತ್ಯಾಸಕ್ಕೆ ಸಂಬಂಧಿಸಿದ ನಿಯಮಗಳು ಇದಕ್ಕೆ ಅನ್ವಯಿಸುವುದಿಲ್ಲ. ಡೇಟಾ API ನಿಯಮಗಳಿಗೆ ಸಂಬಂಧಿಸಿದ ಯಾವುದೇ ವಿವಾದಕ್ಕೆ, ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋ ಕೌಂಟಿಯ ನ್ಯಾಯಾಲಯದಲ್ಲೇ ಪ್ರಕರಣ ನಡೆಯಬೇಕು ಮತ್ತು ಆ ನ್ಯಾಯಾಲಯದ ಅಧಿಕಾರಕ್ಕೆ ಎರಡೂ ಪಕ್ಷಗಳು ಒಪ್ಪಿಕೊಳ್ಳುತ್ತವೆ. ಡೇಟಾ API ನಿಯಮಗಳು, ಜೊತೆಗೆ ಅದರಲ್ಲಿ ಉಲ್ಲೇಖದ ಮೂಲಕ ಸೇರಿಸಲಾದ (ಮತ್ತು ಅದರ ಭಾಗವಾಗಿರುವ ಡೆವಲಪರ್ ನಿಯಮಗಳು ಹಾಗೂ ಬಳಕೆದಾರರ ಒಪ್ಪಂದ), ಈ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಮತ್ತು Reddit ನಡುವಿನ ಸಂಪೂರ್ಣ ಒಪ್ಪಂದವಾಗಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ಮಾಡಿಕೊಂಡ ಅಥವಾ ಇದೇ ಸಮಯದಲ್ಲಿ ಮಾಡಿಕೊಂಡಿದ್ದ ಬೇರೆ ಯಾವುದೇ ಒಪ್ಪಂದಗಳ ಬದಲಿಗೆ ಈ ಒಪ್ಪಂದವೇ ಅನ್ವಯಿಸುತ್ತದೆ.

8.4 ಪ್ರಶ್ನೆಗಳು

ಡೇಟಾ API ನಿಯಮಗಳು ಅಥವಾ ಡೇಟಾ APIs ಬಗ್ಗೆ ಯಾವುದೇ ಪ್ರಶ್ನೆಗಳು ಅಥವಾ ಅಭಿಪ್ರಾಯಗಳನ್ನು ಇಲ್ಲಿ ತಿಳಿಸಬಹುದು.

⌂ 换网址